Trending

ಶಿವಮೊಗ್ಗ : ಮಳೆ-ಗಾಳಿ ಆರ್ಭಟಕ್ಕೆ ಅರ್ಧಕ್ಕೆ ಮೊಟಕುಗೊಂಡ ಬಿಜೆಪಿ ಜನಾಕ್ರೋಶ ಯಾತ್ರೆ

Spread the love

ಶಿವಮೊಗ್ಗ : ಬೆಲೆ ಏರಿಕೆ, ಭ್ರಷ್ಟಾಚಾರ ವಿರೋಧಿಸಿ ಶನಿವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಜನಾಕ್ರೋಶ ಯಾತ್ರೆ ಭಾರಿ ಮಳೆ-ಗಾಳಿಯ ಆಕ್ರೋಶಕ್ಕೆ ಸಿಲುಕಿ ಅರ್ಧಕ್ಕೆ ಮೊಟಕುಗೊಂಡಿತು.

ಸೀನಪ್ಪಶೆಟ್ಟಿ ಸರ್ಕಲ್‌ನಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದರೂ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾಷಣ ಮಾಡಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತು ಆರಂಭಿಸುತ್ತಿದ್ದಂತೆಯೇ ನಿಧಾನವಾಗಿ ಮಳೆ ಆರಂಭವಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತಾಡುತ್ತಿದ್ದಂತೆಯೇ ಮಳೆ ಆರ್ಭಟಿಸತೊಡಗಿತು. ಈ ವೇಳೆ ವೇದಿಕೆಯಲ್ಲಿದ್ದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಅಶೋಕ ನಾಯ್ಕ, ಎಸ್.ರುದ್ರೇಗೌಡ ಅವರಿಗೆ ಅಂಗರಕ್ಷಕರು ಛತ್ರಿ ಹಿಡಿದು ಮಳೆಯಿಂದ ರಕ್ಷಣೆ ನೀಡಿದರು.

ವಿಜಯೇಂದ್ರ ಅವರು ಮಾತು ಮುಂದುವರೆಸುತ್ತಿದ್ದಂತೆಯೇ ಮಳೆಯ ಆರ್ಭಟ ಹೆಚ್ಚಾಯಿತು. ಕುರ್ಚಿಗಳನ್ನು ತಲೆಗೆ ಅಡ್ಡಲಾಗಿ ಹಿಡಿದು ನಿಂತಿದ್ದ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಓಡಿದರು.

ವಿಜಯೇಂದ್ರ ಮಾತು ಮುಗಿಸುತ್ತಿದ್ದಂತೆಯೇ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಗಣ್ಯರು ತೆರಳಿದರು. ನಂತರವೂ ಮಳೆ ಬಿರುಸುಗೊಂಡಿತು. ಗಾಳಿಯ ರಭಸಕ್ಕೆ ಗೋಪಿ ವೃತ್ತದ ಎದುರಿನ ಕಟ್ಟಡದ ಮೇಲಿನ ಬೃಹತ್ ಕಟೌಟ್ ಕಿತ್ತು ಹೋಯಿತು. ನಗರದ ಹಲವೆಡೆ ಮರಗಳ ಟೊಂಗೆಗಳು ಮುರಿದುಬಿದ್ದು ಸಂಚಾರಕ್ಕೆ ಅಡಚಣೆಯಾಯಿತು.

ಜೋರು ಮಳೆ ನಂತರವೂ ಮುಂದುವರೆದಿತ್ತು. ನಗರದ ಬಹಳಷ್ಟು ಭಾಗ ವಿದ್ಯುತ್ ಕಡಿತಗೊಂಡು ಕತ್ತಲೆಯಲ್ಲಿ ಮುಳುಗಿದೆ.

 

 

[pj-news-ticker]