ಭದ್ರಾವತಿ : ಡಾ. ಬಿ.ಆರ್ ಅಂಬೇಡ್ಕರ್ ರವರ 134 ನೇ ಜನ್ಮದಿನದ ಅಂಗವಾಗಿ ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಸಂಶೋಧನಾ ಕೇಂದ್ರದ ಆವರಣದಲ್ಲಿ ಡಿಎಸ್ಎಸ್ ನಿಂದ ಏ. 23 ರಂದು ಜನಕ್ರಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಹಾಗೂ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ತಿಳಿಸಿದರು
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಲಿತರ ಅಭಿವೃದ್ಧಿಗೆ ಮಾರಕವಾಗಿರುವ ಮನುವಾದ ಹಾಗೂ ಕೋಮುವಾದವನ್ನು ಧಿಕ್ಕರಿಸಿ, ಸಂವಿಧಾನ ರಕ್ಷಿಸಬೇಕಾಗಿದೆ. ಆಳುವ ಸರ್ಕಾರಗಳು ದೇಶದಲ್ಲಿ ಮನುವಾದ ಜಾರಿಗೆ ತರಲು ಯತ್ನಿಸುತ್ತಿವೆ, ಜಾತಿ ಹಾಗೂ ಧರ್ಮಗಳಲ್ಲಿ ಒಡಕನ್ನು ಉಂಟುಮಾಡಿ ಸಮಾಜದಲ್ಲಿ ಸಂಘರ್ಷದ ಸನ್ನಿವೇಶಗಳನ್ನು ಸೃಷ್ಟಿ ಮಾಡಿ, ದಲಿತರು ಹಾಗೂ ಹಿಂದುಳಿದ ಜಾತಿಗಳಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಈ ಕುತಂತ್ರದ ವಿರುದ್ಧ ಜನ ಸಿಡಿದೇಳಲು ಜನ ಕ್ರಾಂತಿ ಸಮಾವೇಶಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಡಿಎಸ್ಎಸ್ ಮಾಡುತ್ತಿದೆ.ಈ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಕರೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ವಕೀಲರಾದ ಶಿವಕುಮಾರ್ ಮಾತನಾಡಿ, ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆಯನ್ನು ಮುನ್ನಡೆಸಲು ಭದ್ರಾವತಿ ನ್ಯಾಯಾಲಯವು ಗಿರಿಯಪ್ಪ ಹಾಗೂ ಎಂ. ಗುರುಮೂರ್ತಿ ಬಣದ ಸದಸ್ಯರುಗಳಿಗೆ ಸಂಪೂರ್ಣ ಅಧಿಕಾರ ನೀಡಿದೆ, ಬೇರೆ ಸಂಘಟಕರು ಅಥವಾ ವ್ಯಕ್ತಿಗಳು ಈ ಹೆಸರನ್ನು ದುರ್ಬಳಕೆ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಸಂಘಟನಾ ಸಂಚಾಲಕರಾದ ಬಿ.ಕೃಷ್ಣಪ್ಪ, ಆರ್.ತಮ್ಮಯ್ಯ ರಾಜಶೇಖರ್, ತಾಲೂಕು ಸಂಚಾಲಕ ನಾಗರಾಜ,ಬೊಮ್ಮೇನಹಳ್ಳಿ ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
