ಬೆಂಗಳೂರು: ಅನೇಕ ಬೆಲೆ ಏರಿಕೆಗಳೊಂದಿಗೆ ಜನರ ಮೇಲೆ ಬರೆ ಎಳೆದಿರುವ ರಾಜ್ಯ ಸರ್ಕಾರ, ಇದೀಗ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದೆ. ಡೀಸೆಲ್ ಬೆಲೆ 2 ರೂ. ಏರಿಸಿ ಸರ್ಕಾರ ರಾಜ್ಯದ ಜನರಿಗೆ ಮತ್ತೊಂದು ಬರೆ ಎಳೆದಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಈಗಾಗಲೇ ಹಾಲು, ವಿದ್ಯುತ್, ಟೋಲ್ ದರ ಏರಿಕೆ ಮಾಡಿರುವ ಸರ್ಕಾರ, ಇದೀಗ ಆ ಪಟ್ಟಿಗೆ ಡೀಸೆಲ್ ಅನ್ನು ಸೇರಿಸಿದೆ. ಡೀಸೆಲ್ ಬೆಲೆ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44 ರಿಂದ ಶೇ 21.17 ಗೆ ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ 2 ರೂ. ಏರಿಕೆ ಮಾಡಿದೆ.
ಅದರಂತೆ, ರಾಜ್ಯದಲ್ಲಿ ಡೀಸೆಲ್ ದರ 91.02 ರೂ. ಆಗಲಿದೆ. ಈ ಮುಂಚೆ ಬೆಂಗಳೂರಲ್ಲಿ ಡೀಸೆಲ್ ದರ 89.02 ರೂ. ಇದೆ. ಪರಿಷ್ಕೃತ ದರ ಇಂದಿನಿಂದಲೇ ಅನ್ವಯವಾಗಲಿದೆ. ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯದ ಜನರ ಮೇಲೆ ಮತ್ತೆ ಹೊರೆ ಬೀಳಲಿದೆ. ಸರಕುಗಳು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
