ಬೆಂಗಳೂರು: ವಿಧಾನಸಭೆ ಚುನಾವಣೆ 2023ಕ್ಕೆ ಸಮಯ ಸನ್ನಿಹಿತವಾಗುತ್ತಿದೆ. ಈ ಬಾರಿ ಕೇಸರಿ ಪಾಳಯದಲ್ಲಿ ನಾಲ್ಕೈದು ಮಂದಿ ಹಾಲಿ ಶಾಸಕರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ಸಿಗಲಿದೆ ಎಂದು ಕೆಲ ದಿನಗಳ ಹಿಂದೆ ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವ ಬೆನ್ನಲ್ಲೇ ಬಿಜೆಪಿಯಿಂದ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯ ಪಟ್ಟಿ ಬಿಡುಗಡೆಯಾಗಿದೆ.
ಶೋಭಾ ಕರಂದ್ಲಾಜೆಯವರನ್ನು ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥೆಯನ್ನಾಗಿ ನೇಮಿಸಿ ರಾಜ್ಯ ಬಿಜೆಪಿ ಆದೇಶ ಹೊರಡಿಸಿದೆ. ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸದಸ್ಯರಾಗಿ ಸಚಿವರುಗಳು, ಪ್ರಮುಖ ಸಂಸದರು, ಶಾಸಕರಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯಲ್ಲಿ 25 ನಾಯಕರಿಗೆ ಸ್ಥಾನ ಸಿಕ್ಕಿದೆ. 25 ಜನರ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಸ್ಥಾನ ನೀಡಲಾಗಿದೆ. ಇನ್ನು ಚುನಾವಣಾ ನಿರ್ವಹಣಾ ಸಮಿತಿಯಲ್ಲಿ 14 ನಾಯಕರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ಗೆ ಸ್ಥಾನ ನೀಡಲಾಗಿದೆ.