Trending

ಶಿವಮೊಗ್ಗದಲ್ಲಿ ಐವರು ಮಕ್ಕಳಿಗೆ ಎಚ್ಎಂಪಿವಿ ಸೋಂಕು!

Spread the love

ಶಿವಮೊಗ್ಗ: ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ಸೋಂಕು ಪತ್ತೆಯಾದ ಬೆನ್ನಲ್ಲೇ ಶಿವಮೊಗ್ಗದಲ್ಲೂ ಐವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿರುವುದು ತಿಳಿದುಬಂದಿದೆ. ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಐವರು ಮಕ್ಕಳಲ್ಲಿ ಎಚ್ಎಂಪಿವಿ ಸೋಂಕು (HMPV Cases) ಕಂಡುಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಎಚ್ಎಂಪಿ ವೈರಸ್ ಸೋಂಕು ದೃಢಪಟ್ಟ ಬಗ್ಗೆ ವೈದ್ಯ ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ. ಆರು ತಿಂಗಳಿನಿಂದ ಎರಡು ವರ್ಷದೊಳಗಿನ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿತ್ತು. ಮಕ್ಕಳಲ್ಲಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ಶಂಕೆ ಹಿನ್ನೆಲೆ ಸ್ವಾಬ್ ತೆಗೆದು ಟೆಸ್ಟ್ ಮಾಡಿಸಲಾಗಿತ್ತು. ನಂತರ ಲ್ಯಾಬ್ ವರದಿಯಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಎನ್ನುವುದು ದೃಢಪಟ್ಟಿತ್ತು. ಉಸಿರಾಟದ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿ ಮಕ್ಕಳಿಗೆ ಗುಣಪಡಿಸಲಾಗಿದೆ ಎಂದು ಡಾ. ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ ನವೆಂಬರ್ ತಿಂಗಳಿನಿಂದಲೇ ಈ ಸೋಂಕು ಆರಂಭವಾಗಿದೆ. 2 ವರ್ಷ, 11 ತಿಂಗಳು, 4 ವರ್ಷ , 1 ವರ್ಷ ಹಾಗೂ 6 ತಿಂಗಳಿನ ಮಗು ಸೇರಿ ಒಟ್ಟು ಐದು ಮಕ್ಕಳಲ್ಲಿ ಎಚ್ಎಂಪಿ ವೈರಸ್ ಪತ್ತೆಯಾಗಿದ್ದು ಎಲ್ಲರೂ ಗುಣಮುಖರಾಗಿದ್ದಾರೆ ಎಂದಿದ್ದಾರೆ.

ಎಚ್‌ಎಂಪಿವಿ ವೈರಸ್ ಆತಂಕ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗಳು ಈಗಾಗಲೇ ಮಾರ್ಗಸೂಚಿ ಪ್ರಕಟಿಸಿವೆ. ಜನಸಂದಣಿ ಪ್ರದೇಶಗಳಿಂದ ದೂರವಿರಿ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು, ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ತೊಳೆಯಲು ಸೂಚಿಸಲಾಗಿದೆ. ಕೆಮ್ಮುವಾಗ ಮೂಗು, ಬಾಯಿ ಮುಚ್ಚಿಕೊಳ್ಳಬೇಕು, ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದ್ದಾರೆ.

 

[pj-news-ticker]