Spread the love

ಲಖನೌ: ಇಳಿ ವಯಸ್ಸಿನಲ್ಲಿ ತಮ್ಮ ಬಗ್ಗೆ ತಾತ್ಸಾರ ತೋರಿದ ಮಕ್ಕಳ ಮೇಲೆ ಕೋಪಗೊಂಡ 80 ವರ್ಷದ ಹಿರಿಯ ನಾಗರಿಕರೊಬ್ಬರು, ತಮ್ಮ ಸುಮಾರು 1.5 ಕೋಟಿ ರೂ. ಸ್ವಯಾರ್ಜಿತ ಆಸ್ತಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಬರೆದುಕೊಡುವ ಮೂಲಕ ‘ಸ್ವೀಟ್‌ ರಿವೇಂಜ್‌’ ತೀರಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಮುಜಫ್ಫರನಗರದ ಬಿರಾಲ್‌ ಗ್ರಾಮದ ನಾಥು ಸಿಂಗ್‌, ಮೂಲತಃ ರೈತ. ಇವರಿಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಸೇರಿ ಐವರು ಮಕ್ಕಳಿದ್ದಾರೆ. ಹೆಣ್ಣುಮಕ್ಕಳೆಲ್ಲ ಗಂಡನ ಮನೆ ಸೇಡಿದ್ದಾರೆ. ಮಗ ವೃತ್ತಿಯಿಂದ ಶಿಕ್ಷಕ. ಆದರೆ ಮಕ್ಕಳ್ಯಾರೂ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ನಾಥುಸಿಂಗ್‌ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಯಾವ ಮಕ್ಕಳಿಗೂ ಕೊಡದೆ ಸರಕಾರಕ್ಕೆ ಕೊಡಲು ನಿರ್ಧರಿಸಿದ್ದಾರೆ. ಆ ಆಸ್ತಿಯಲ್ಲಿ ಬರುವ ಹಣವನ್ನು ಬಳಸಿ ಸರಕಾರದ ವತಿಯಿಂದ ಶಾಲೆಯನ್ನೋ, ಆಸ್ಪತ್ರೆಯನ್ನೋ ನಿರ್ಮಾಣ ಮಾಡಿ ಎಂದು ಮನವಿ ಮಾಡಿದ್ದಾರೆ. ತಮ್ಮ ಮಕ್ಕಳ ಬಗ್ಗೆ ತೀವ್ರವಾಗಿ ನೊಂದುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾದ ನಾಥು ಸಿಂಗ್‌, ಮನೆಯಲ್ಲಿಯೂ ಒಬ್ಬಂಟಿತನ ಅನುಭವಿಸುತ್ತಿದ್ದರು. ಹೀಗಾಗಿ ಮಕ್ಕಳ ಉಸಾಬರಿಯೇ ಬೇಡ ಎಂದು ವೃದ್ಧಾಶ್ರಮಕ್ಕೆ ಸೇರಿದ್ದಾರೆ. ಆದರೆ ಅಲ್ಲಿಯೂ ಅವರ ಪರಿಸ್ಥಿತಿ ಬದಲಾಗಲಿಲ್ಲ. ವರ್ಷಗಳು ಕಳೆದರೂ ಅವರನ್ನು ನೋಡಲು ಮಗ- ಸೊಸೆ, ಹೆಣ್ಣುಮಕ್ಕಳು ಯಾರೂ ಬಂದಿಲ್ಲ. ಇದು ಅವರನ್ನು ಸಿಟ್ಟಿಗೆಬ್ಬಿಸಿತ್ತು. ಹೀಗಾಗಿ ಅವರಾರೂ ತಮ್ಮ ಆಸ್ತಿಗೆ ವಾರಸುದಾರರಾಗಲು ಯೋಗ್ಯರಲ್ಲ ಎಂದು ನಾಥು ಸಿಂಗ್‌ ತೀರ್ಮಾನಿಸಿದ್ದಾರೆ. ತಮ್ಮ ಒಡೆತನದ 1.5 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಮತ್ತು ಮನೆಯನ್ನು ಉತ್ತರ ಪ್ರದೇಶ ರಾಜ್ಯಪಾಲರಿಗೆ ಬರೆದುಕೊಟ್ಟಿದ್ದಾರೆ. ಬುಧಾನಾ ತಾಲೂಕು ಉಪ ನೋಂದಾಣಾಧಿಕಾರಿ ಪಂಕಜ್‌ ಜೈನ್‌ ಈ ವಿಚಾರವನ್ನು ದೃಢಪಡಿಸಿದ್ದಾರೆ.

Leave a Reply

Your email address will not be published. Required fields are marked *