ಮುಂಬೈ: ಲೆಜೆಂಡರಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಆಪ್ತ ವಿನೋದ್ ಕಾಂಬ್ಳಿ ಆರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದ್ದು, ಅವರ ಹೀನಾಯ ಪರಿಸ್ಥಿತಿ ಕುರಿತು ಅವರ ಆಪ್ತ ಗೆಳೆಯ ಮಾಹಿತಿ ನೀಡಿದ್ದಾರೆ.
ಹೌದು.. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ವೇದಿಕೆ ಮೇಲಿದ್ದ ತಮ್ಮ ಗೆಳೆಯ ವಿನೋದ್ ಕಾಂಬ್ಳಿ ಬಳಿ ಹೋಗಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಸಚಿನ್ ರನ್ನು ಗುರುತಿಸಿದ ವಿನೋದ್ ಕಾಂಬ್ಳಿ ಸಚಿನ್ ರ ಕೈಯನ್ನು ಗಟ್ಟಿಯಾಗಿ ಹಿಡಿದು ಭಾವುಕರಾದರು.
ಅಪರೂಪಕ್ಕೆ ಈ ಇಬ್ಬರು ಸ್ನೇಹಿತರು (ತೆಂಡೂಲ್ಕರ್, ಕಾಂಬ್ಳಿ) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಗುರುತಿಸಲು ಕಷ್ಟವಾಗುವಷ್ಟರ ಮಟ್ಟಿಗೆ ಕಾಂಬ್ಳಿ ಅನಾರೋಗ್ಯ ಪೀಡಿತರಾಗಿದ್ದರು.
ಇಷ್ಟಕ್ಕೂ ವಿನೋದ್ ಕಾಂಬ್ಳಿಗೇನಾಗಿದೆ? ಅವರ ಆರೋಗ್ಯ ಯಾಕಿಷ್ಟು ಹದಗಟ್ಟಿದೆ?
ವಿನೋದ್ ಕಾಂಬ್ಳಿ ತಮ್ಮ ಜೀವನದಲ್ಲಿ ವಿಪರೀತ ಕುಡಿತದ ಚಟವನ್ನು ಬೆಳೆಸಿಕೊಂಡಿದ್ದದ್ದು, ಅವರ ಕ್ರೀಡಾ ಜಗತ್ತಿಗೆ ಭಾರೀ ಹಿನ್ನಡೆಗೆ ಕಾರಣವಾಯಿತು. ಕಾಂಬ್ಲಿ ದಿನದ ಬಹುತೇಕ ಸಮಯವನ್ನು ಬಾರ್ ನಲ್ಲಿ ಕಳೆಯುತ್ತಿದ್ದರು. ಕುಡಿತದ ಚಟ, ಸಣ್ಣಸಣ್ಣ ಅಪರಾಧಗಳನ್ನೂ ಅವರಿಂದ ಮಾಡಿಸಿತು. ತಮ್ಮ ಜೀವನದಲ್ಲಿ ಸುಧಾರಣೆ ತರುವ ಕಡೆ ಗಮನ ಕೊಡದ ವಿನೋದ್ ಕಾಂಬ್ಳಿ, ತನ್ನ ಕಷ್ಟದ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಕೈಹಿಡಿಯಲಿಲ್ಲ ಎಂದು ಬಹಿರಂಗವಾಗಿಯೇ ದೂರಿದರು.
ಆರೋಗ್ಯ ಸಮಸ್ಯೆ ಬಹಿರಂಗ ಮಾಡಿದ ಆಪ್ತ ಸ್ನೇಹಿತ
ಇದೆಲ್ಲದರ ನಡುವೆ ವಿನೋದ್ ಕಾಂಬ್ಳಿ ಆರೋಗ್ಯ ತೀರಾ ಹದಗೆಟ್ಟಿತ್ತು. ಇದು ಎಷ್ಟರಮಟ್ಟಿಗೆ ಎಂದರೆ ಒಂದು ಕಾಲದ ಸ್ಟಾರ್ ಕ್ರಿಕೆಟರ್ ಎದ್ದು ನಿಲ್ಲಲೂ ಕೂಡ ಆಗದ ಸ್ಥಿತಿಯಲ್ಲಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗಿತ್ತು. ಇದೀಗ ಕಾಂಬ್ಳಿ ಅವರ ಆಪ್ತ ಸ್ನೇಹಿತರೊಬ್ಬರು ಅವರ ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ.
ಕಾಂಬ್ಳಿಗೆ ತೀವ್ರವಾದ, ಬಹು ಆರೋಗ್ಯ ಸಮಸ್ಯೆಗಳಿದ್ದು, ಅವರ ಕುಡಿತದ ಚಟ ಬಿಡಿಸಲು ಅವರನ್ನು ಬರೊಬ್ಬರಿ 14 ಬಾರಿ ಪುನರ್ವಸತಿ ಕೇಂದ್ರ (rehab)ಕ್ಕೆ ದಾಖಲಿಸಲಾಗಿತ್ತು ಎಂದು ಕಾಂಬ್ಳಿ ಆಪ್ತ ಹಾಗೂ ಮಾಜಿ ಪ್ರಥಮ ದರ್ಜೆ ಕ್ರಿಕೆಟ್ ಅಂಪೈರ್ ಮಾರ್ಕಸ್ ಕೌಟೊ ಹೇಳಿದ್ದಾರೆ.
ಕಾಂಬ್ಳಿ ಪುನರ್ವಸತಿ ಕೇಂದ್ರಕ್ಕೆ ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ.. ಕಾಂಬ್ಳಿ ಈಗಾಗಲೇ 14 ಬಾರಿ ಪುನರ್ವಸತಿಗೆ ಹೋಗಿದ್ದಾರೆ. ಮೂರು ಬಾರಿ ನಾವು ಅವನನ್ನು ವಸೈನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದೇವೆ ಎಂದು ಕೌಟೋ ಹೇಳಿದ್ದಾರೆ.