ನವದೆಹಲಿ: ನಿನ್ನೆ ದಕ್ಷಿಣ ದೆಹಲಿಯನ್ನೇ ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇದೀಗ ಹತ್ಯೆ ಆರೋಪಿಯ ವಿಚಾರ ತಿಳಿಯುತ್ತಿದ್ದಂತೆ ನೆರೆಹೊರೆಯವರೇ ಆಘಾತಕ್ಕೆ ಒಳಗಾಗಿದ್ದಾರೆ.
ಬುಧವಾರ ಬೆಳ್ಳಂಬೆಳಗ್ಗೆ ದಕ್ಷಿಣ ದೆಹಲಿಯ ನೆಬ್ ಸರೈ ಪ್ರದೇಶದಲ್ಲಿ ತ್ರಿವಳಿ ಕೊಲೆ ನಡೆದಿದ್ದು, ದಂಪತಿ ಹಾಗೂ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ನಡೆಸಲಾಗಿತ್ತು ಎನ್ನಲಾಗಿದೆ, ಇನ್ನು ಹತ್ಯೆ ನಡೆದ ಸಮಯದಲ್ಲಿ ದಂಪತಿಯ ಪುತ್ರ ವಾಕಿಂಗ್ ಹೋಗಿದ್ದು ಬರುವಷ್ಟರಲ್ಲಿ ಈ ದುರ್ಘಟನೆ ನಡೆದಿತ್ತು ಎಂದು ಹೇಳಲಾಗಿದೆ ಅಲ್ಲದೆ ಪುತ್ರ ಮನೆಗೆ ಬಂದು ನೋಡಿದಾಗ ಮನೆಯ ಕೊನೆಯಲ್ಲಿ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಆಘಾತಗೊಂಡ ಮಗ ನೆರೆಹೊರೆಯವರಿಗೆ ತಾನು ವಾಕಿಂಗ್ ಹೋಗಿ ಬರುವಷ್ಟರಲ್ಲಿ ಯಾರೋ ದುಷ್ಕರ್ಮಿಗಳು ನನ್ನ ಮನೆಯವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾನೆ.
ಇತ್ತ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ವೇಳೆ ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನಾಗಿರಲಿಲ್ಲ ಹಾಗಾಗಿ ಕಳ್ಳತನ ನಡೆಸಲು ಕೃತ್ಯ ಎಸಗಿಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ.
ಇನ್ನು ವಾಕಿಂಗ್ ಹೋಗಿರುವ ಮಗನನ್ನು ವಿಚಾರಣೆ ನಡೆಸಿದ ವೇಳೆ ಆತ ಪೊಲೀಸರಲ್ಲಿ ಬೇರೆ ಬೇರೆ ಕಾರಣಗಳನ್ನು ನೀಡಿದ್ದಾನೆ ಆದರೆ ಪೊಲೀಸರಿಗೆ ಮಗನ ಮೇಲೆ ಅನುಮಾನಗೊಂಡು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಕೊಲೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಹೇಳಿದ್ದೇನು?
ಕೊಲೆ ಆರೋಪಿ ಅರ್ಜುನ್ ಬುಧವಾರ ತನ್ನ ತಂದೆ ತಾಯಿಯ ಮದುವೆಯ ವಾರ್ಷಿಕೋತ್ಸವ ಇತ್ತು ಆದರೆ ಅದಕ್ಕೂ ಮೊದಲು ತನಗೂ ತಂದೆಗೂ ಜಗಳ ನಡೆದಿತ್ತು ಈ ವೇಳೆ ತಂದೆ ತನ್ನ ಎಲ್ಲ ಆಸ್ತಿಯನ್ನು ಮಗಳ ಹೆಸರಿಗೆ ಬರೆದಿದ್ದರು ಇದರಿಂದ ಕೋಪಗೊಂಡಿದ್ದ ಮಗ ಮದುವೆಯ ವಾರ್ಷಿಕೋತ್ಸವ ದಿನದಂತೆ ಹತ್ಯೆ ನಡೆಸಲು ನಿರ್ಧರಿಸಿದ್ದೆ ಹಾಗೆಯೆ ಮಂಗಳವಾರ ರಾತ್ರಿ ಎಲ್ಲರು ಮಲಗಿದ ವೇಳೆ ತಂದೆ ತಾಯಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ನಡೆಸಿದ್ದು ಇದಾದ ಬಳಿಕ ತನ್ನ ಸಹೋದರಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದಾದ ಬಳಿಕ ಏನೂ ಆಗಿಲ್ಲ ಎಂಬಂತೆ ಮಲಗಿದ್ದ ಅರ್ಜುನ್ ಬೆಳಿಗ್ಗೆ ಎಂದಿನಂತೆ ವಾಕಿಂಗ್ ಹೋಗಿ ವಾಪಾಸ್ ಬಂದಾಗ ನಾಟಕ ಮಾಡಿ ನಾನು ವಾಕಿಂಗ್ ಹೋಗಿ ಬರುವಷ್ಟರಲ್ಲಿ ಯಾರೋ ಅಪರಿಚಿತರು ಕೊಲೆ ಮಾಡಿ ಹೋಗಿದ್ದಾರೆ ಎಂದು ನೆರೆಹೊರೆಯವರ ಬಳಿ ಹೇಳಿ ತಾನೇನು ಮಾಡಿಲ್ಲ ಎಂಬಂತೆ ವರ್ತಿಸಿ ನೆರೆಹೊರೆಯವರನ್ನು ನಂಬಿಸಿದ್ದಾನೆ.
ನೆರೆಹೊರೆಯವರಿಗೆ ಆಘಾತ:
ಇನ್ನು ಮಗನೆ ತನ್ನ ಹೆತ್ತ ತಂದೆ ತಾಯಿ, ಸಹೋದರಿಯನ್ನು ಹತ್ಯೆ ಮಾಡಿರುವ ವಿಚಾರ ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬರುತ್ತಿದ್ದಂತೆ ನೆರೆಹೊರೆಯವರು ಆಘಾತಕ್ಕೆ ಒಳಗಾಗಿದ್ದಾರೆ.