ನವದೆಹಲಿ: ವಾಣಿಜ್ಯ ವಾಹನ ಚಾಲಕರಿಗೊಂದು ಸಿಹಿ ಸುದ್ದಿ, ಲಘು ಮೋಟಾರು ವಾಹನ(ಎಲ್‌ಎಂವಿ)ದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯೂ 7,500 ಕೆಜಿ ತೂಕದವರೆಗಿನ ಸಾರಿಗೆ ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಈ ಮಹತ್ವದ ತೀರ್ಪು ನೀಡಿದ್ದು, ಇದರಿಂದ ನಿರ್ದಿಷ್ಟ ತೂಕದ ಸಾರಿಗೆ ವಾಹನಗಳು ಅಪಘಾತಗಳು ಸಂಭವಿಸಿದಲ್ಲಿ ಮತ್ತು ಕಾನೂನು ಷರತ್ತುಗಳ ಪ್ರಕಾರ ಅವುಗಳನ್ನು ಓಡಿಸಲು ಚಾಲಕರಿಗೆ ಅನುಮತಿ ಇಲ್ಲದಿದ್ದರೆ ಕ್ಲೈಮ್‌ಗಳನ್ನು ತಿರಸ್ಕರಿಸುತ್ತಿದ್ದ ವಿಮಾ ಕಂಪನಿಗಳಿಗೆ ಆಘಾತವಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ LMV ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಕಾರಣ ಎಂಬುದಕ್ಕೆ ಯಾವುದೇ ಪ್ರಾಯೋಗಿಕ ಡಾಟಾ ಇಲ್ಲ ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರು ಹೇಳಿದ್ದಾರೆ.
ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು 1988 ರ ಮೋಟಾರು ವಾಹನಗಳ (ಎಂವಿ) ಕಾಯ್ದೆಗೆ ತಿದ್ದುಪಡಿ ಮಾಡುವ ಸಮಾಲೋಚನೆಗಳು “ಬಹುತೇಕ ಪೂರ್ಣಗೊಂಡಿವೆ” ಎಂದು ವಾದ ಮಂಡಿಸಿದ ನಂತರ ಸುಪ್ರೀಂ ಕೋರ್ಟ್ ಆಗಸ್ಟ್ 21 ರಂದು ತನ್ನ ತೀರ್ಪನ್ನು ಕಾದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಆದಷ್ಟು ಬೇಗ ಕಾನೂನಿಗೆ ತಿದ್ದುಪಡಿ ತರುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ತನ್ನ 2017ರ ತೀರ್ಪನ್ನು ಎತ್ತಿ ಹಿಡಿದಿದೆ. ಇದರಲ್ಲಿ ಎಲ್ಎಂವಿ ಪರವಾನಗಿ ಹೊಂದಿರುವವರು 7500 ಕೆಜಿ ವರೆಗಿನ ಸಾರಿಗೆ ವಾಹನಗಳನ್ನು ಓಡಿಸಲು ಅನುಮತಿಸಲಾಗಿದೆ. ಈಗ ಎಲ್ಎಂವಿ ಪರವಾನಗಿ ಹೊಂದಿರುವವರು 7500 ಕೆಜಿ ತೂಕದ ಸಾರಿಗೆ ವಾಹನಗಳನ್ನು ಓಡಿಸಲು ಸಾಧ್ಯವಾಗುತ್ತದೆ.