ಶಿವಮೊಗ್ಗ: ಬೆಳೆ ರಕ್ಷಣೆಗೆ ಹಾಕಿದ್ದ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕು ಆಯನೂರು ಸಮೀಪ ನಡೆದಿದೆ. ಘಟನೆ ಬೆಳಕಿಗೆ ಬಂದ ಜಮೀನು ಮಾಲೀಕನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ತಾಲೂಕಿನ ಸಿರಿಗೆರೆ, ಪುರದಾಳು ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿತ್ತು. ಈ ಆನೆಗಳನ್ನು ಇಲ್ಲಿಂದ ಓಡಿಸಬೇಕು ಅಥವಾ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು. ಹಾಗಾಗಿ ಸೆಕ್ರೆಬೈಲು ಬಿಡಾರದಿಂದ ಮೂರು ಆನೆಗಳನ್ನು ತಂದು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಈ ನಡುವೆ ಆನೆಯೊಂದು ಆಯನೂರು ಸಮೀಪ ಕಾಡಾನೆ ಉಪಟಳ ತಡೆಗೆ ತೆಗೆದಿದ್ದ ಟ್ರಂಚ್‌ನಲ್ಲಿ ಸತ್ತು ಬಿದ್ದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಮೇಲ್ನೋಟಕ್ಕೆ ಆನೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ಮೊದಲೆ ಆನೆ ಟ್ರಂಚ್‌ಗೆ ಬಿದ್ದು ಮೇಲೆ ಬರಲಾಗದೆ ಸಾವನ್ನಪ್ಪಿದೆ ಎಂದು ಅಂದಾಜಿಸಲಾಗಿತ್ತು. ಹತ್ತಿರ ಹೋಗಿ ನೋಡಿದಾಗ ವಿದ್ಯುತ್ ತಂತಿ ತುಂಡಾಗಿರುವುದು ಗೊತ್ತಾಗಿದೆ.
ಘಟನೆ ಸಂಬಂಧ ಜಮೀನು ಮಾಲೀಕನನ್ನು ವಶಕ್ಕೆ ಪಡೆಯಲಾಗಿದ್ದು ಬುಧವಾರ ಆನೆಯ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ.