ದಾವಣಗೆರೆ: ರಾಜ್ಯದಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸುತ್ತಿರುವುದನ್ನು ವಿರೋಧಿಸಿ ಸೋಮವಾರ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ ಒಳಗೊಂಡಂತೆ ಹಲವು ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು.
ಬಿಜೆಪಿ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಉಪ ವಿಭಾಗಾಧಿಕಾರಿ ಕಚೇರಿ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.
ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆಗೆ ಮುಂದಾಗುತ್ತಿದ್ದಂತೆಯೇ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಪೊಲೀಸ್ ಕವಾಯತ್ ಮೈದಾನಕ್ಕೆ ಕರೆದೊಯ್ದರು.
ರಾಜ್ಯ ಸರ್ಕಾರ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸುತ್ತಿರುವುದರ ವಿರುದ್ಧ ನಮ್ಮ ಹೋರಾಟ ನಿರಂತವಾಗಿ ನಡೆಯಲಿದೆ. ಪಹಣಿ ಕಾಲಂ 11 ರಲ್ಲಿ ವಕ್ಫ್ ಬೋರ್ಡ್ ಹೆಸರನ್ನು ನಮೂದಿಸುವ ಮೂಲಕ ಆಸ್ತಿ ಕಬಳಿಸಲಾಗುತ್ತಿದೆ. ಯಾವುದೇ ರೈತರು, ಇತರರು ವಕ್ಪ್ ಬೋರ್ಡ್ ಹೆಸರಿನಲ್ಲಿ ಆಸ್ತಿ ಕಳೆದುಕೊಂಡಿದ್ದರೆ, ಇಲ್ಲವೇ ಸಮಸ್ಯೆ ಹೊಂದಿದ್ದರೆ ಅಂತಹವರ ನೆರವು, ಹೋರಾಟಕ್ಕಾಗಿ ಜಿಲ್ಲಾ ಬಿಜೆಪಿ ಪಹಣಿ ಪರಿಶೀಲನಾ ಅಭಿಯಾನ ಕೈಗೊಂಡಿದೆ ಎಂದು ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ ತಿಳಿಸಿದರು.
ವಕ್ ಸಚಿವ ಜಮೀರ್ ಅಹಮ್ಮದ್ ಅವರು ಕ್ಯಾನ್ಸರ್‌ನಂತೆ. ಧರ್ಮಾಂಧತೆಯ ಮೂಲಕ ಹಿಂದು ಸಮಾಜ, ಮಠ, ಮಾನ್ಯಗಳು, ದೇವಸ್ಥಾನಗಳ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಅವರು ಹೇಳಿದ್ದರಿಂದಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ನಮೂದು ಮಾಡಲಿಕ್ಕೆ ಆಗುತ್ತದೆ. ಇಲ್ಲವಾದಲ್ಲಿ ಇಲ್ಲ ಎಂದು ತಿಳಿಸಿದರು.