ಚೆನ್ನೈ: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಇನ್ನು ಎರಡು ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ಅವರು ತಮ್ಮ ರಾಜಕೀಯ ಜೀವನ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದು ಅವರ ನೂತನ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂ’ ಎಂದು ಹೆಸರನ್ನು ಘೋಷಿಸಿದ್ದಾರೆ.
ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿದ ಬಳಿಕ ಇಂದು ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ನಟ ವಿಜಯ್, ನಮ್ಮ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ, ಮುಂಬರುವ 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
2024ರಲ್ಲಿ ಸ್ಪರ್ಧೆಯಿಲ್ಲ: ಅದೇ ರೀತಿ ನಾವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ನಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಸಾಮಾನ್ಯ ಮತ್ತು ಕಾರ್ಯಕಾರಿ ಮಂಡಳಿ ಸಭೆಗಾಗಿ ನಾವು ಈ ನಿರ್ಧಾರವನ್ನು ಮಾಡಿದ್ದೇವೆ ಎಂದು ಕೂಡ ಸ್ಪಷ್ಟನೆ ನೀಡಿದ್ದಾರೆ.
ನಟ ವಿಜಯ್ ಅವರ ಆಪ್ತರು ಹೇಳುವ ಪ್ರಕಾರ, ಕೇರಳ ಮತ್ತು ಕರ್ನಾಟಕದಲ್ಲಿ ಅವರ ಬಲವಾದ ಮತ್ತು ಸಂಘಟಿತ ಅಭಿಮಾನಿಗಳನ್ನು ಗಮನಿಸಿದರೆ ಪಕ್ಷದ ವ್ಯಾಪ್ತಿಯು ತಮಿಳುನಾಡು ರಾಜ್ಯವನ್ನು ಮೀರಿ ವಿಸ್ತರಿಸುವ ಸಾಧ್ಯತೆಯಿದೆ.