ದಾವಣಗೆರೆ: ದಾವಣಗೆರೆ ಮೂಲದ ಪತಿ,ಪತ್ನಿ ಮತ್ತು ಗಂಡು ಮಗು ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ.
ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಯೋಗೇಶ್ ಹೊನ್ನಾಳ್ (37), ಪ್ರತಿಭಾ ಹೊನ್ನಾಳ್(35) ಮತ್ತು ಯಶ್ ಹೊನ್ನಾಳ್(6) ಮೃತಪಟ್ಟಿದ್ದಾರೆ.
ಮೃತ ಯೋಗೇಶ್ ಹೊನ್ನಾಳ್ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರು. ದಾವಣಗೆರೆಯಲ್ಲಿ ಬಹಳ ವರ್ಷದಿಂದ ವಾಸವಾಗಿದ್ದರು. ಯೋಗೇಶ್ ಹೊನ್ನಾಳ್ ತಂದೆ ನಿವೃತ್ತ ಉಪ ತಹಶೀಲ್ದಾರ್ ಆಗಿದ್ದಾರೆ. ಯೋಗೇಶ್ ಮತ್ತು ಪ್ರತಿಭಾ ಇಬ್ಬರೂ ಇಂಜಿನಿಯರ್ ಆಗಿದ್ದರು. 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಅಮೆರಿಕದಲ್ಲಿ ವಾಸವಾಗಿದ್ದರು.
ಪತಿ ಪತ್ನಿ ಹಾಗು ಮಗುವಿನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಲವು ಅನುಮಾನಗಳು ಹುಟ್ಟಿಸಿದ, ಮೂವರ ಸಾವಿಗೆ ನಿಖರ ಕಾರಣ ತಿಳಿಸುವಂತೆ ಮತ್ತು ಸ್ವದೇಶಕ್ಕೆ ಪಾರ್ಥಿವ ಶರೀರಗಳ ತರಿಸಿಕೊಡುವಂತೆ ಪೋಷಕರು ಸರಕಾರಕ್ಕೆ ಮನವಿ ಮಾಡಿದ್ದಾರೆ.