Spread the love

 ಡಾ. ಪ್ರೀತಂ

ತೀರ್ಥಹಳ್ಳಿತಾಲೂಕು ರಾಷ್ಟ್ರದಲ್ಲಿ ಪ್ರಚಲಿತವಿರುವ ವಿಧಾನಸಭಾ ಕ್ಷೇತ್ರ. ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆ ಈ ಕ್ಷೇತ್ರದಾಗಿದೆ. ಶೇಕಡಾ 80 ರಷ್ಟು ಮತ ಚಲಾಯಿಸುವ ಮತದಾರರು ಇಲ್ಲಿದ್ದಾರೆ. ಇಲ್ಲಿ ಹಣ ಹೆಂಡ ಜಾತಿಗಿಂತಲೂ, ವ್ಯಕ್ತಿಯ ವರ್ಚಸ್ಸೇ ಮುಖ್ಯ. ಹೀಗಾಗಿ ಇಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಗೆದ್ದು ಸೋತಿದ್ದಾರೆ. 

ಕ್ಷೇತ್ರದ ಉದ್ದ 102 ಕಿಲೋಮೀಟರ್ ಇದ್ದು ರಾಜ್ಯದಲ್ಲಿಯೇ ವಿಸ್ತಾರವಾದ ದೊಡ್ಡ ಕ್ಷೇತ್ರವಾಗಿದೆ. ಸಮಾಜವಾದದ ಬೇರು ಹುಟ್ಟಿದ್ದೇ ತೀರ್ಥಹಳ್ಳಿಯಲ್ಲಿ, ಅದರ ಹರಿಕಾರ ಶಾಂತವೇರಿಗೋಪಾಲಗೌಡರು ತೀರ್ಥಹಳ್ಳಿಯಲ್ಲಿಯೇ ಜನಿಸಿದವರು. ರಾಜ್ಯಾದ್ಯಂತ ಸಮಾಜವಾದದ ಸಂದೇಶದೊಂದಿಗೆ ಸಮಾಜದಲ್ಲಿ ಸಮರತೆಯನ್ನು ಮೂಡಿಸುವ ಯತ್ನ ಪ್ರಾರಂಭವಾದದ್ದು,ಈ ನೆಲದಿಂದಲೇ. ಅಷ್ಟೇ ಅಲ್ಲದೆ ರಾಷ್ಟ್ರಕವಿ ಕುವೆಂಪು, ಯು.ಆರ್ ಅನಂತಮೂರ್ತಿ, ಸೇರಿದಂತೆ ಹಲವು ಕವಿ, ಸಾಹಿತಿ, ಕಲಾವಿದರಿಗೆ ಪ್ರಕೃತಿ ದೇವಿ ಸ್ಪೂರ್ತಿಯಾಗಿದ್ದಾಳೆ.

ರಾಜ್ಯಕ್ಕೊಬ್ಬ ಮಾದರಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಹಾಗೂ ಜಸ್ಟಿಸ್ ರಾಮಾಜೋಯಿಸ್ ರಂತಹ ವ್ಯಕ್ತಿಗಳನ್ನು ನೀಡಿದೆ. ಸಮಾಜವಾದದಿಂದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಂದು ಕ್ಷೇತ್ರದಲ್ಲಿ ಬಿಜೆಪಿ ನೆಲೆನಿಂತಿದೆ. ಮುಖ್ಯವಾಗಿ ಒಕ್ಕಲಿಗ, ಈಡಿಗ, ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿದ್ದರೂ ಅಂತಿಮವಾಗಿ ಬ್ರಾಹ್ಮಣ ಹಾಗೂ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಲಿವೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಚಿತ್ರಣ:

– ಪುರುಷ ಮತದಾರರು-92141

– ಮಹಿಳಾ ಮತದಾರರು-94453

– ಒಟ್ಟು ಮತದಾರರು-1,86594

– ಒಕ್ಕಲಿಗ 45 ಸಾವಿರ, ಈಡಿಗ-40 ಸಾವಿರ

– ಬ್ರಾಹ್ಮಣ-15 ಸಾವಿರ, ಮುಸ್ಲಿಂ 12 ಸಾವಿರ

– ಪರಿಶಿಷ್ಟ ಪಂಗಡ-15 ಸಾವಿರ

– ಬಿಲ್ಲವ ಬಂಟ್ಸ್ ಮೊಗವೀರ ಕೊಂಕಣಿ 40 ಸಾವಿರ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಈಡಿಗರು ಹೆಚ್ಚಿನ ಸಮಬಲದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಅಂತಿಮವಾಗಿ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಆರಗ ಜ್ಞಾನೇಂದ್ರ, ಎಎಪಿ ಶಿವಕುಮಾರಗೌಡ, ಐಎನ್ಸಿ ಕಿಮ್ಮನೆ ರತ್ನಾಕರ, ಕೆಆರ್ಎಸ್ ನ ಕೆ.ಎ.ಅರುಣ, ಜೆಡಿಎಸ್ ರಾಜಾರಾಂ ಹೆಗ್ಗಡೆ ಕಣದಲ್ಲಿದ್ದಾರೆ.

2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ರು. ಆರಗ ಜ್ಞಾನೇಂದ್ರ 67,527 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ 45572 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

ಯಾರಿಗೆ ಪ್ಲಸ್ ಯಾರಿಗೆ ಮೈನಸ್?

2018 ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕಿಮ್ಮನೆ ರತ್ನಾಕರ್ ಸೋಲಿನ ನಂತರವೂ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಪೂರಕವಾಗಿ ಹೋರಾಟ, ಪಾದಯಾತ್ರೆ ಮಾಡಿದ್ದರು. ಅಲ್ಲದೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಬಿಸಿ ಮುಟ್ಟಿಸಿದ್ದ ಆರ್.ಎಂ ಮಂಜುನಾಥ್ ಗೌಡರು ಕಿಮ್ಮನೆ ರತ್ನಾಕರ್ ಅವರಿಗೆ ಸಾರಥಿಯಾಗಿದ್ದಾರೆ. ಇವರಿಬ್ಬರ ಒಗ್ಗಟ್ಟು ಹಾಗೂ ವೈಯಕ್ತಿಕ ವರ್ಚಸ್ಸು ಕಾಂಗ್ರೆಸ್ ಗೆಲುವಿಗೆ ಪೂರಕ ಎನ್ನಲಾಗಿದೆ.

ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಆರಗ ಜ್ಞಾನೇಂದ್ರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾರ್ಯಕರ್ತರ ಕೆಲಸಗಳನ್ನು ಸರಿಯಾಗಿ ಮಾಡಿಕೊಡಲಿಲ್ಲ ಎಂಬ ಅಸಮಧಾನವಿದೆ. ಬಿಜೆಪಿಗೆ ಓಟು ಚಲಾಯಿಸುತ್ತಾರೆಯೇ ಹೊರತು ಕಾರ್ಯಕರ್ತರು, ಹುಮ್ಮಸ್ಸಿನಿಂದ ಮತದಾರರನ್ನು ಮತಗಟ್ಟೆಗೆ ತರುವಷ್ಟರ ಮಟ್ಟಿಗೆ ಪ್ರಯತ್ನ ಹಾಕುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಇನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಮೆಟ್ಟಲೇರಿದ ಜಮೀನು ಬೇಲಿ ವಿವಾದಗಳಿಗೆ ದ್ವೇಷದ ರಾಜಕಾರಣ ಮಾಡಿದ್ರು ಎಂಬ ಆರೋಪ ಆರಗ ಮೇಲಿದೆ. ಇದು ಯಾವ ರೀತಿ ಚುನಾವಣೆಯಲ್ಲಿ ಪರಿಣಾಮ ಬೀರುತ್ತೆ ಎಂಬುದು ಪ್ರಶ್ನೆಯಾಗಿದೆ. ಜೆಡಿಎಸ್ ಅಭ್ಯರ್ಥಿ ರಾಜರಾಂ ಹೆಚ್ಚು ಮತಗಳನ್ನು ಪಡೆದರೆ, ಅದು ಬಿಜೆಪಿಗೆ ವರವಾಗುತ್ತೆ. ಇನ್ನು ಮತದಾರರು ಗೆಲ್ಲುವ ಅಭ್ಯರ್ಥಿಗೆ ಕೈಜೋಡಿಸಿದರೆ, ಅದು ಕಾಂಗ್ರೆಸ್ ಗೆ ಅನುಕೂಲವಾಗುವ ಸಾಧ್ಯತೆಗಳು ಹೆಚ್ಚಿದೆ.

Leave a Reply

Your email address will not be published. Required fields are marked *