ಅಸ್ಸಾಂ: ಮಕ್ಕಳ ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಡಿ ಜೈಲಿನಲ್ಲಿದ್ದ ಐವರು ಕೈದಿಗಳು 20 ಅಡಿ ಎತ್ತರದ ತಡೆಗೋಡೆಯನ್ನು ಜಿಗಿದು ಪರಾರಿಯಾಗಿರುವ ಘಟನೆ ಅಸ್ಸಾಂನ ಮೋರಿಗಾಂವ್ ಜಿಲ್ಲಾ ಕಾರಾಗೃಹದಿಂದ ಶುಕ್ರವಾರ (ಅ.11) ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಇಲ್ಲಿನ ಕಾರಾಗೃಹದಲ್ಲಿ ಮಕ್ಕಳ ಲೈಂಗಿಕ ಅಪರಾಧಗಳ (Pocso) ಕಾಯ್ದೆಯಡಿ ಬಂಧಿತರಾಗಿದ್ದ ಹಲವು ಮಂದಿ ಕೈದಿಗಳು ಇದ್ದರು ಎನ್ನಲಾಗಿದೆ ಶುಕ್ರವಾರ ರಾತ್ರಿ ಐವರು ಕೈದಿಗಳು ಜೈಲು ಸಿಬಂದಿಗಳಿಗೆ ಮಂಕುಬೂದಿ ಎರಚಿ ಲುಂಗಿ ಮತ್ತು ಬೆಡ್ ಶೀಟ್ ಬಳಸಿಕೊಂಡು ಅದರ ಸಹಾಯದಿಂದ ಸುಮಾರು ಇಪ್ಪತ್ತು ಅಡಿ ಎತ್ತರದ ತಡೆಗೋಡೆಯನ್ನು ಏರಿ ಪರಾರಿಯಾಗಿದ್ದಾರೆ.
ಪರಾರಿಯಾಗಿರುವ ಆರೋಪಿಗಳನ್ನು ಸೈಫುದ್ದೀನ್, ಜಿಯಾರುಲ್ ಇಸ್ಲಾಂ, ನೂರ್ ಇಸ್ಲಾಂ, ಮಫಿದುಲ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪೋಕ್ಸೋ ಸಂಬಂಧಿತ ಅಪರಾಧಗಳಿಗಾಗಿ ಬಂಧನದಲ್ಲಿದ್ದರು ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು ಜೈಲು ಅಧಿಕಾರಿಗಳೇ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ, ಮೋರಿಗಾಂವ್ ಜಿಲ್ಲಾ ಕಾರಾಗೃಹವನ್ನು ಪ್ರಸ್ತುತ ಸೂಪರಿಂಟೆಂಡೆಂಟ್ ಪ್ರಶಾಂತ ಸೈಕಿಯಾ ಅವರು ನಿರ್ವಹಿಸುತ್ತಿದ್ದು, ಹೆಚ್ಚುವರಿ ಉಪ ಆಯುಕ್ತೆ ಪಲ್ಲವಿ ಕಚಾರಿ ಅವರು ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.
ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಸುತ್ತ ಮುತ್ತಲ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ, ಹೆಚ್ಚಿನ ಕಡೆಗಳಲ್ಲಿ ನಾಕಾಬಂದಿ ನಡೆಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ, ಅಲ್ಲದೆ ರೈಲು, ಬಸ್ಸು ನಿಲ್ದಾಣ ಮುಂತಾದ ಕಡೆಗಳಲ್ಲೂ ಹೆಚ್ಚಿನ ಸಿಬಂದಿಗಳನ್ನು ನಿಯೋಜಿಸಿ ತಪಾಸಣೆ ನಡೆಸಲಾಗುತ್ತಿದ್ದು ಇದುವರೆಗೂ ಪತ್ತೆಯಾಗಿಲ್ಲ.