ಶಿವಮೊಗ್ಗ : ನಗರದ ತುಂಗಾ ನದಿ ಮಧ್ಯೆ ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಶಿವಮೊಗ್ಗ ನಗರದ ಹಳೆ ಸೇತುವೆ ಪಕ್ಕದಲ್ಲಿರುವ ಬಂಡೆ ಮೇಲೆ ಸಿಲುಕಿದ್ದ ಗೋಪಾಲ್ (35) ಎಂಬ ವ್ಯಕ್ತಿಯನ್ನು ಅಗ್ನಿಶಾಮಕದಳ ಸಿಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ ಸಿಬಂದಿ ರಕ್ಷಣ ಕಾರ್ಯಾಚರಣೆಗಿಳಿದಿದ್ದಾರೆ. ಗೋಪಾಲ್ ಕಳೆದ ರಾತ್ರಿ ತುಂಗಾ ನದಿ ನಡುವೆ ಇರುವ ಬಂಡೆ ಮೇಲೆ ಹೋಗಿ ಮಲಗಿದ್ದ ಬೆಳಗ್ಗೆ ಎಚ್ಚರವಾದಾಗ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ದಡಕ್ಕೆ ಬರಲಾಗದೆ ಆತಂಕಕ್ಕೀಡಾಗಿದ್ದ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳ ಸಿಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಗೋಪಾಲ್‌ನನ್ನು ರಕ್ಷಣೆ ಮಾಡಲಾಗಿದೆ.