Trending

ಕಾಂಗ್ರೆಸ್‌ ಅಭ್ಯರ್ಥಿ, ಕುಸ್ತಿಪಟು ಫೋಗಾಟ್‌ ಗೆ ಜಯ, ಬಿಜೆಪಿಯ ಯೋಗೇಶ್‌ ಗೆ ಸೋಲು

Spread the love

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ, ಕುಸ್ತಿಪಟು ವಿನೇಶ್‌ ಫೋಗಾಟ್‌ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕ್ಯಾಪ್ಟನ್‌ ಬೈರಾಗಿ ವಿರುದ್ಧ ಜಯಗಳಿಸಿದ್ದಾರೆ.

ಚುನಾವಣ ಆಯೋಗದ ಮಾಹಿತಿ ಅನ್ವಯ, ವಿನೇಶ್‌ ಫೋಗಾಟ್‌ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್‌ ಕುಮಾರ್‌ ಬೈರಾಗಿ ಅವರನ್ನು 6,000 ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆಯ ಮತಎಣಿಕೆ ಮಂಗಳವಾರ (ಅ.08) ಬೆಳಗ್ಗೆ 8ಗಂಟೆಯಿಂದ ಆರಂಭಗೊಂಡಿದ್ದು, ಈವರೆಗಿನ ಫಲಿತಾಂಶದ ಪ್ರಕಾರ, 90 ಸದಸ್ಯಬಲದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರುವ ಸಿದ್ಧತೆಯಲ್ಲಿದೆ. ಕಾಂಗ್ರೆಸ್‌ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಇಂಡಿಯನ್‌ ನ್ಯಾಷನಲ್‌ ಲೋಕ ದಳ(INLD)ದ ಅಭ್ಯರ್ಥಿ ಸುರೇಂದರ್‌ ಲಾತರ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಆರಂಭಿಕ ಮತಎಣಿಕೆಯಲ್ಲಿ ವಿನೇಶ್‌ ಫೋಗಾಟ್‌ ಅಲ್ಪಪ್ರಮಾಣದ ಮುನ್ನಡೆ ಸಾಧಿಸಿದ್ದರು. ಆದರೆ 3,4, 5ನೇ ಸುತ್ತಿನಲ್ಲಿ ವಿನೇಶ್‌ ಗಿಂತ ಬಿಜೆಪಿಯ ಯೋಗೇಶ್‌ ಕುಮಾರ್‌ ಮುನ್ನಡೆ ಸಾಧಿಸಿದ್ದರು. ಈ ಸಂದರ್ಭದಲ್ಲಿ ಫೋಗಾಟ್‌ ಮತಎಣಿಕೆ ಕೇಂದ್ರದಿಂದ ಹೊರನಡೆದಿದ್ದರು. ಆದರೆ ಮತ್ತೆ ಮುನ್ನಡೆ ಕಾಯ್ದುಕೊಂಡ ವಿನೇಶ್‌ ಈಗ ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.

ಅಕ್ಟೋಬರ್‌ 5ರಂದು ಹರಿಯಾಣ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆದಿತ್ತು. ಈ ಬಾರಿ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ.67.90ರಷ್ಟು ಮತದಾನವಾಗಿತ್ತು.

[pj-news-ticker]