ಬಳ್ಳಾರಿ: ಮಾಜಿ ಸಚಿವ, ಶಾಸಕ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಭೇಟಿಗೆ ಇದ್ದ ನಿಷೇಧ ಅಂತ್ಯವಾಗಿದೆ. ಹೀಗಾಗಿ ರೆಡ್ಡಿಯ ತವರೂರ ವನವಾಸ ಅಂತ್ಯವಾಗಿದೆ.
ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿಯಾಗಿದ್ದ ಜನಾರ್ದನ ರೆಡ್ಡಿಯವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆ.5 ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಪರಿಣಾಮ ಆಂಧ್ರದ ಚರ್ಲಪಲ್ಲಿ ಜೈಲು ಸೇರಿದ್ದರು.
ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಜನಾರ್ದನ ರೆಡ್ಡಿ ಪ್ರಭಾವಿಯಾಗಿದ್ದು ಸಾಕ್ಷಿ ನಾಶ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ ಪ್ರದೇಶಗಳಾದ ಬಳ್ಳಾರಿ, ಅನಂತಪುರ ಮತ್ತು ಕರ್ನೂಲು ಜಿಲ್ಲೆ ಪ್ರವೇಶ ನಿಷೇಧ ಹೇರಲಾಗಿತ್ತು.
ಹೀಗಾಗಿ 13 ವರ್ಷಗಳಿಂದ ಜನಾರ್ದನ ರೆಡ್ಡಿ ಬಳ್ಳಾರಿಯಿಂದ ದೂರವಿದ್ದರು. ಮಗಳ ಮದುವೆ, ಮೊಮ್ಮೊಗಳ ನಾಮಕರಣ ಸೇರಿದಂತೆ ಇತರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಲ್ಕೈದು ಬಾರಿ ಬಳ್ಳಾರಿಗೆ ಬಂದಿದ್ದರು. ಆದರೆ ಇದೀಗ ಶಾಶ್ವತವಾಗಿ ಬಳ್ಳಾರಿಗೆ ಬರಲು ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.