ಬೆಂಗಳೂರು: ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಮಹಾಲಕ್ಷ್ಮೀ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ ವ್ಯಕ್ತಿ ಮುಕ್ತಿ ರಂಜನ್ ಒಡಿಶಾದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 21 ರಂದು ಬೆಂಗಳೂರಿನ ವೈಯಾಲಿಕಾವಲ್ ಪ್ರದೇಶದ ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಹತ್ಯೆಮಾಡಿ ಬಳಿಕ ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್ ನಲ್ಲಿ ಇಟ್ಟು ಆರೋಪಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ದೇಹದ ಭಾಗಗಳನ್ನು ವಶಪಡಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಈ ನಡುವೆ ಶಂಕಿತ ಆರೋಪಿ ಒಡಿಶಾದಲ್ಲಿರುವ ಮಾಹಿತಿ ಪಡೆದ ಪೊಲೀಸರ ತಂಡ ಆರೋಪಿಯ ಪತ್ತೆಗೆ ಒಡಿಶಾಕ್ಕೆ ತೆರಳಿತ್ತು ಇದರ ನಡುವೆ ಮಹಾಲಕ್ಷ್ಮಿಯನ್ನು ಹತ್ಯೆಗೈದ ಶಂಕಿತ ಆರೋಪಿ ಎನ್ನಲಾದ ಮುಕ್ತಿ ರಂಜನ್ ತನ್ನ ಮನೆಯ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ.