ಮೈಸೂರು: ನಾಡಹಬ್ಬ ದಸರಾ ಉತ್ಸವಕ್ಕೆ ಬಂದಿರುವ ಗಜಪಡೆಯ ಆನೆಗಳಲ್ಲಿ ಒಂದಾದ ಧನಂಜಯ ಆನೆ ಮದವೇರಿ ಕಂಜನ್ ಆನೆಯೊಂದಿಗೆ ಕಾದಾಟಕ್ಕಿಳಿದಿದ್ದಾನೆ. ಪರಿಣಾಮ ಕಂಜನ್ ಅರಮನೆಯಿಂದೀಚೆಗೆ ಬಂದು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ 8ರ ಸಮಯದಲ್ಲಿ ಧನಂಜಯ, ತನ್ನ ಪಕ್ಕದಲ್ಲಿದ್ದ ಕಂಜನ್ ನೊಂದಿಗೆ ಕಾದಾಟ ಶುರು ಮಾಡಿದ್ದಾನೆ. ಈ ವೇಳೆ ಕಂಜನ್ ಕಟ್ಟಿದ್ದ ಸರಪಳಿ ಕಿತ್ತುಕೊಂಡು ಅರಮನೆ ಅಂಗಳದಲ್ಲಿ ಓಡಾಡಿದೆ. ಹಿಂದೆಯಿಂದ ಧನಂಜಯ ಕಂಜನ್‌ನನ್ನು ಬೆದರಿಸುತ್ತ ಓಡಿದ್ದಾನೆ. ಇದರಿಂದ ಮತ್ತಷ್ಟು ಹೆದರಿದ ಕಂಜನ್ ಜಯಮಾರ್ತಾಂಡ ದ್ವಾರದ ಮೂಲಕ ದೊಡ್ಡಕೆರೆ ಮೈದಾನದ ಬಳಿಯ ರಸ್ತೆಯತ್ತ ಓಡಿದೆ.
ಈ ವೇಳೆ ರಸ್ತೆಯಲ್ಲಿದ್ದ ಜನರು ಆನೆಗಳ ಈ ವರ್ತನೆಗೆ ಹೆದರಿ ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಬಳಿಕ ರಸ್ತೆಯಲ್ಲಿನ ವಾಹನ ಕಂಡು ಕಂಜನ್ ಗಕ್ಕನೆ ನಿಂತಿದ್ದಾನೆ. ಮಾವುತ- ಕಾವಾಡಿಗಳ ಚಾಣಾಕ್ಷತದಿಂದ ಅದನ್ನು ಸಮಾಧಾನ ಪಡಿಸಿ ಒಳಗೆ ಕರೆದುಕೊಂಡು ಹೋಗಿದ್ದಾರೆ.
ಗಜಪಯಣ ಮೂಲಕ ಮೈಸೂರಿಗೆ ಕರೆತಂದಾಗ ಲಾರಿಯಿಂದ ಕೆಳಗಿಳಿಯಬೇಕಾದರೆ ಕಂಜನ್ ಕಾಲಿಗೆ ಪೆಟ್ಟಾಗಿದ್ದರಿಂದ ಗಜಪಡೆಯ ಎಲ್ಲಾ ತಾಲೀಮಿನಿಂದ ವಿನಾಯಿತಿ ನೀಡಿ ಚಿಕಿತ್ಸೆ ಕೊಡಲಾಗಿತ್ತು. ವಾರದ ಹಿಂದೆಯಷ್ಟೇ ಚೇತರಿಸಿಕೊಂಡಿದ್ದ ಕಂಜನ್ ವ್ಯತಿರಿಕ್ತವಾಗಿ ವರ್ತಿಸಿರುವುದು ಆತಂಕಕ್ಕೆ ಕಾರಣವಾಗಿದೆ.