ಬೆಂಗಳೂರು: ತಿರುಪತಿಯ ತಿರುಮಲ ದೇಗುಲದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಹೇಳಿಕೆ ನೀಡಿದ ನಂತರ ತೀವ್ರ ವಿವಾದ ಎದ್ದಿದ್ದು, ಇದರ ಬಿಸಿ ರಾಜ್ಯದ ಪ್ರಮುಖ ದೇವಾಲಯಗಳಿಗೆ ತಟ್ಟಿದೆ. ಕರ್ನಾಟಕದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದವನ್ನು ಪರೀಕ್ಷೆಗೊಳಪಡಿಸಿಯೇ ಭಕ್ತರಿಗೆ ಹಂಚಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕರ್ನಾಟಕದಲ್ಲಿ 34,000 ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ ದೇವಾಲಯಗಳಿವೆ, ಅವುಗಳಲ್ಲಿ 205 ವರ್ಗ-ಎ ದೇವಾಲಯಗಳ ವಾರ್ಷಿಕ ಆದಾಯ 25 ಲಕ್ಷಕ್ಕೂ ಹೆಚ್ಚಾಗಿವೆ. 193 ವರ್ಗ-ಬಿ ದೇವಾಲಯಗಳ ವಾರ್ಷಿಕ ಆದಾಯ 5 ಲಕ್ಷದಿಂದ 25 ಲಕ್ಷ ರೂಪಾಯಿಗಳಾಗಿವೆ. ಉಳಿದವು 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ವರ್ಗ-ಸಿ ದೇವಾಲಯಗಳಾಗಿ ವರ್ಗೀಕರಿಸಲ್ಪಟ್ಟಿವೆ. ಈ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ ಎಂದರು.
ಕರ್ನಾಟಕದ ದೇವಾಲಯಗಳಲ್ಲಿ ಅಂತಹ ಯಾವುದೇ ಘಟನೆಗಳು ಅಥವಾ ಕಲಬೆರಕೆಯಾಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಆದರೆ ಜನರಿಗೆ ಯಾವುದೇ ಅನುಮಾನ ಬೇಡ, ಆದ್ದರಿಂದ ನಾವು ಪರೀಕ್ಷೆಗೆ ಆದೇಶಿಸುತ್ತೇವೆ ಎಂದರು.