ಕಲಬುರಗಿ: ಕಲಬುರಗಿ ಜಿಲ್ಲೆಯ ಹುಮನಾಬಾದ್ ರಸ್ತೆಯ ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಬೆಂಕಿ ಹತ್ತಿ ಉರಿದಿದ್ದು, ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್ಗೆ ಸಿಟ್ಟಿನಿಂದ ಯುವಕ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ.
ಆರಂಭದಲ್ಲಿ ಎಲ್ಲರೂ ಶಾಟ್೯ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ ಎಂದುಕೊಂಡಿದ್ದರು. ಆದರೆ ಪೊಲೀಸರು ಇದು ಕುಕೃತ್ಯ ಎಂದು ತನಿಖೆ ವೇಳೆ ಪತ್ತೆಹಚ್ಚಿರುವುದಾಗಿ ತಿಳಿದುಬಂದಿದೆ.
ನಡೆದ ಘಟನೆಯೇನು?: ಮಹಮ್ಮದ್ ನದೀಮ್ ಎಂಬ ವ್ಯಕ್ತಿ ತನ್ನ ಏಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ಬಳಿಕ ಪೆಟ್ರೋಲ್ ತಂದು ಶೋ ರೂಂ ಒಳಗೆ ಬೆಂಕಿ ಹಚ್ಚಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ಸಂಬಂಧ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಧ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯಲ್ಲಿ 6 ಹೊಸ ಎಲೆಕ್ಟ್ರಿಕ್ ಬೈಕ್ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಕೇವಲ 20 ದಿನದ ಹಿಂದೆ ಓಲಾ ಕಂಪನಿಯ ಸ್ಕೂಟರ್ ಖರೀದಿಸಿದ್ದ ಆರೋಪಿಯ ಬೈಕ್ ಪದೇ ಪದೇ ರಿಪೇರಿಗೆ ಬರುತ್ತಿದೆ ಎಂದು ಸಿಟ್ಟಾಗಿದ್ದ. ಸಾಕಷ್ಟು ಬಾರಿ ಶೋರೂಂಗೆ ಬಂದು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದ. ಆದರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಬೇಸತ್ತು ಶೋ ರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ.