Breaking
Tue. Oct 8th, 2024

ಶೀಘ್ರದಲ್ಲೇ ಬೆಂಗಳೂರು – ಬೆಳಗಾವಿ ನಡುವೆ ವಂದೇ ಭಾರತ್‌ ರೈಲು ಸಂಚಾರ?

By Mooka Nayaka News Sep 10, 2024
Spread the love

ಬೆಳಗಾವಿ: ಪುಣೆ-ಬೆಳಗಾವಿ ವಂದೇ ಭಾರತ್‌ ರೈಲು ಸಂಚಾರವನ್ನು ಹುಬ್ಬಳ್ಳಿವರೆಗೆ ವಿಸ್ತರಿಸಿರುವ ಬೆನ್ನಲ್ಲೇ, ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಲು ಕೊನೆಗೂ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಿದ್ದಾರೆ.

ಜನಪ್ರತಿನಿಧಿಗಳು ಈ ಬಗ್ಗೆ ರೈಲ್ವೆ ಇಲಾಖೆ ಸಚಿವರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಹಕ್ಕೊತ್ತಾಯ ಮಾಡಿದ್ದಾರೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೆಲವೇ ದಿನಗಳಲ್ಲಿ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್‌ ಸಂಚಾರ ಆರಂಭಿಸುವುದಾಗಿ ಭರವಸೆ ವ್ಯಕ್ತವಾಗಿದೆ.

ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್‌ ರೈಲನ್ನು ಬೆಳಗಾವಿವರೆಗೂ ವಿಸ್ತರಿಸುವಂತೆ ವಿಭಾಗೀಯ ರೈಲ್ವೆ ಸಲಹಾ ಮಂಡಳಿ ಸದಸ್ಯರೂ ಆಗಿರುವ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಜೂನ್‌ ತಿಂಗಳಲ್ಲಿ ಮನವಿ ಮಾಡಿದ್ದರಿಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು, ಬೆಳಗಾವಿವರೆಗೂ ವಿಸ್ತರಿಸಿ ಆದೇಶಿಸಿದ್ದರು. ಧಾರವಾಡದಿಂದ ಬೆಳಗಾವಿ ವರೆಗಿನ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿತ್ತು. ಆದರೆ, ಹುಬ್ಬಳ್ಳಿ ಭಾಗದ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ನೈರುತ್ಯ ರೈಲ್ವೆ ಇಲಾಖೆ ಮಾತ್ರ ಲೋಂಡಾ ಮಾರ್ಗದಲ್ಲಿನ ತಾಂತ್ರಿಕ ಅಡಚಣೆ ಸೇರಿ ಹತ್ತಾರು ನೆಪ ಹೇಳಿ ವಿಸ್ತರಣೆ ಮಾಡಿರಲಿಲ್ಲ.

ಇದೀಗ ತಾಂತ್ರಿಕ ಅಡೆತಡೆ ಎನ್ನುವ ಮಾರ್ಗದಲ್ಲೇ ಬೆಳಗಾವಿಯಿಂದ ಹುಬ್ಬಳ್ಳಿ ವರೆಗೆ ಮತ್ತೊಂದು ವಂದೇ ಭಾರತ್‌ ರೈಲು ಸಂಚಾರ ಆರಂಭಿಸುತ್ತಿದೆ. ಅಂದರೆ, ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್‌ ರೈಲು ಬೆಳಗಾವಿಗೆ ಸಂಚರಿಸದಂತೆ ತಡೆಯೊಡ್ಡಲು ಕಾರಣಗಳೇ ಇಲ್ಲದಂತಾಗಿದೆ. ಇನ್ನಾದರೂ ಇಲಾಖೆ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೇ ಬೆಳಗಾವಿ ವರೆಗೆ ಸಂಚಾರ ವಿಸ್ತರಿಸಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

Related Post