ಬೆಂಗಳೂರು: ಇಲ್ಲಿ ನೀಡಲಾಗಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ನಟ ದರ್ಶನ್, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋ ಇದು. ಈ ಫೋಟೋದಲ್ಲಿರುವ ನಾಲ್ವರೂ ಇದೀಗ ಭಾರಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮೂವರು ಆಗಲೇ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದರೆ, ಭವಾನಿ ರೇವಣ್ಣ ಮಾತ್ರವೇ ತಾತ್ಕಾಲಿಕವಾಗಿ ಪಾರಾಗಿದ್ದಾರೆ.
ಈ ಫೋಟೋ ತೆಗೆಸಿಕೊಂಡಿರುವುದು ಎಲ್ಲಿ ಮತ್ತು ಯಾವಾಗ ಎಂಬುದು ಇದೀಗ ಚರ್ಚೆ ಹುಟ್ಟುಹಾಕಿದೆ. ಲೋಕಸಭೆ ಚುನಾವಣೆಗೂ ಮುನ್ನ ಹಾಸನ ಪ್ರವಾಸದಲ್ಲಿದ್ದ ವೇಳೆ ದರ್ಶನ್, ಎಚ್‌ಡಿ ರೇವಣ್ಣ ನಿವಾಸದಲ್ಲಿ ಇವರು ಮೂರನ್ನೂ ಭೇಟಿಯಾದ ಸಂದರ್ಭದಲ್ಲಿ ತೆಗೆಸಿಕೊಂಡಿರುವ ಫೋಟೋ ಇದಾಗಿದೆ ಎನ್ನಲಾಗುತ್ತಿದೆ. ಫೋಟೋ ತೆಗೆಸಿಕೊಂಡ ಗಳಿಗೆಯಿಂದಲೇ ಈ ನಾಲ್ವರನ್ನೂ ದುರದೃಷ್ಟ ದೇವತೆ ಅಟಕಾಯಿಸಿಕೊಂಡಿದ್ದಾಳೆ.
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾರೆ. ಅದರ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣನನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಸ್ವಲ್ಪದರಲ್ಲಿ ಅವರು ಎಸ್‌ಐಟಿ ಬಂಧನ ಹಾಗೂ ಜೈಲುಪಾಲಾಗುವಿಕೆಯಿಂದ ತಪ್ಪಿಸಿಕೊಂಡಿದ್ದಾರೆ.
ಇದೀಗ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್ ರೇವಣ್ಣನ ಬಂಧನವಾಗಿದ್ದು, ಅವರೂ ಜೈಲು ಸೇರಿದ್ದಾರೆ. ಅತ್ತ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಕಂಬಿ ಎಣಿಸುತ್ತಿದ್ದಾರೆ. ನಾಲ್ಕೂ ಪ್ರಕರಣಗಳೂ ದೇಶಾದ್ಯಂತ ಸುದ್ದಿಯಾಗಿವೆ.
ಮೊದಲ ಮೂರು ಪ್ರಕರಣಗಳು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮರ್ಯಾದೆಯನ್ನೇ ಬೀದಿಗೆ ತಂದು ನಿಲ್ಲಿಸಿವೆ. ದರ್ಶನ್ ಪ್ರಕರಣ ಇನ್ನೊಂದು ಬಗೆ ಕರಾಳತೆ, ಕ್ರೌರ್ಯವನ್ನು ಅನಾವರಣಗೊಳಿಸಿದೆ. ಸಾಮಾಜಿಕ ಜಾಲತಾಣಗಳ ನೋಡುಗರು ಇದೀಗ ವೈರಲ್ ಆಗುತ್ತಿರುವ ಫೋಟೋವನ್ನು ಮುಂದಿಟ್ಟುಕೊಂಡು ತರಹೇವಾರಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಕೆಲವರು ‘ಇದೊಂದು ಕಾಕತಾಳೀಯ!ʼ ಎಂದಿದ್ದಾರೆ. ಇನ್ನೊಬ್ಬರು “ಪರಪ್ಪನ ಅಗ್ರಹಾರದಿಂದ ಲೈವ್ʼʼ ಎಂದು ವಿನೋದವಾಡಿದ್ದಾರೆ. ಇನ್ನೊಬ್ಬರು, “ಈ ಫೋಟೋ ಇಟ್ಟುಕೊಂಡು ಈ ನಾಲ್ಕೂ ಮಂದಿಗೂ ಯಾರೋ ಮಾಟ- ಮಂತ್ರ ಮಾಡಿಸಿದ್ದಾರೆ” ಎಂದು ಹೇಳಿದ್ದಾರೆ. ದರ್ಶನ್ ಫ್ಯಾನ್ ಒಬ್ಬಾತ, ʼಈ ಫ್ಯಾಮಿಲಿ ಜೊತೆ ಫೋಟೋ ತೆಗೆಸಿಕೊಂಡದ್ದರಿಂದಲೇ ಡಿ ಬಾಸ್‌ಗೆ ದುರದೃಷ್ಟ ಮೆಟ್ಟಿಕೊಂಡಿತುʼ ಎಂದು ಹೇಳಿದ್ದಾನೆ. ʼಈ ಫೋಟೋ ತೆಗೆದ ಗಳಿಗೆಯೇ ಚೆನ್ನಾಗಿರಲಿಲ್ಲʼ ಎಂದಿದ್ದಾನೆ ಮತ್ತೊಬ್ಬ.