ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದ ಮಾಜಿ ಶಾಸಕ, ಹಿರಿಯ ರಾಜಕಾರಣಿ ಕೆ.ಎಚ್. ಶ್ರೀನಿವಾಸ್ ನಿಧನರಾಗಿದ್ದಾರೆ. ಮೃತರಿಗೆ 86 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.
ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಅವರು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಮಾಜವಾದಿ ಚಿಂತನೆಯ ಹಿನ್ನೆಲೆಯ ಶ್ರೀನಿವಾಸ್ ಅವರು ಶಿವಮೊಗ್ಗ ಜಿಲ್ಲೆ ಸಾಗರದಿಂದ ತಮ್ಮ ರಾಜಕೀಯವನ್ನು ಆರಂಭಿಸಿದರು. ಡಿ.ದೇವರಾಜ ಅರಸು ಅವರ ಸರ್ಕಾರದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇತರ ಖಾತೆಗಳನ್ನು ನಿರ್ವಹಿಸಿದ್ದರು. ಕಾಂಗ್ರೆಸ್‌ನಲ್ಲಿ ಮೂಲೆಗುಂಪು ಮಾಡಿದಾಗ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಆ ಸಂದರ್ಭದಲ್ಲಿ ಅವರು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು.
ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ವಕೀಲರಾಗಿ. ಕೃಷಿಕರಾಗಿದ್ದರು. ಮೊದಲಿಗೆ ಜನತಾಪರಿವಾರದಲ್ಲಿ ಗುರುತಿಸಿಕೊಂಡ ಅವರು ನಂತರದ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಮತ್ತು ಬಿಜೆಪಿಯಲ್ಲಿ ಇದ್ದರು. ಕಳೆದ ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಾಣದಿಂದ ದೂರ ಉಳಿದಿದ್ದರು. ಡಾ.ಯು.ಆರ್.ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ, ಲಂಕೇಶ್ ಅವರ ಒಡನಾಡಿಯೂ ಆಗಿದ್ದರು. ಕೆ.ಎಚ್ ಶ್ರೀನಿವಾಸ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.