Trending

ದೃಶ್ಯಂ ಸಿನಿಮಾ ವೀಕ್ಷಿಸಿ ತಂದೆಯನ್ನೇ ಕೊಂದ ಪುತ್ರ: ಹತ್ಯೆ ಮಾಡಲೆಂದೇ 2,000 ಕಿ.ಮೀ ಪ್ರಯಾಣ, ಆರೋಪಿ ಸಿಕ್ಕಿ ಬಿದ್ದಿದ್ದೇ ರೋಚಕ

Spread the love

ಪಟನಾ : ವ್ಯಕ್ತಿಯೊಬ್ಬ ಬಾಲಿವುಡ್‌ನ ಕ್ರೈಂ ಥ್ರಿಲ್ಲರ್ ‘ದೃಶ್ಯಂ’ ಸಿನಿಮಾ ನೋಡಿ ತಂದೆಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ಸೂರತ್‌ನಲ್ಲಿ ನೆಲೆಸಿದ್ದ ಆರೋಪಿಯು ಸುಮಾರು 2,000 ಕಿಲೋಮೀಟರ್ ದೂರದಲ್ಲಿರುವ ಸಮಸ್ತಿಪುರದಲ್ಲಿರುವ ತನ್ನ ಮನೆಗೆ ತೆರಳಿದ್ದಾನೆ. ಬಳಿಕ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿ, ನಿದ್ರಿಸುತ್ತಿದ್ದ ತನ್ನ ತಂದೆಯನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ.

ನಂತರ ತಾನು ಮಾಡಿದ್ದ ಅಪರಾಧದ ಯಾವುದೇ ಸುಳಿವು ಸಿಗದಂತೆ ನೋಡಿಕೊಂಡಿದ್ದೇನೆ ಎಂದು ಭಾವಿಸಿ ಮತ್ತೆ ಸೂರತ್‌ಗೆ ಹಿಂದಿರುಗಿದ್ದಾನೆ. ಆದರೆ, ಆತ ತನ್ನ ಪತ್ನಿಗೆ ಮಾಡಿದ ಒಂದೇ ಒಂದು ಫೋನ್‌ ಕರೆ, ಆತ ಎಚ್ಚರಿಕೆಯಿಂದ ರೂಪಿಸಿದ್ದ ಕೊಲೆಯ ರಹಸ್ಯವನ್ನು ಬಯಲು ಮಾಡಿದೆ.

ಸಮಷ್ಟಿಪುರ ಜಿಲ್ಲೆಯ ದರ್ವಾ ಗ್ರಾಮದಲ್ಲಿ  ಈ ಕೊಲೆ ನಡೆದಿದೆ. 50 ವರ್ಷದ ರಘುವೀರ್ ಸಾಹ್ನಿ ಮೃತ ದುರ್ದೈವಿ. ಅವರು ಮನೆಯ ಹೊರಗೆ ಮಲಗಿದ್ದಾಗ ಅವರ 26 ವರ್ಷದ ಮಗ ಶಿವಶಂಕರ್ ಕೊಡಲಿಯಿಂದ ಕಡಿದು ಪರಾರಿಯಾಗಿದ್ದಾನೆ.

ಶಿವಶಂಕರ್‌ ತನ್ನ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಸೂರತ್‌ನಲ್ಲಿ ವಾಸವಾಗಿದ್ದ ಆತ ಅಲ್ಲೇ ಉದ್ಯೋಗ ಮಾಡುತ್ತಿದ್ದ. ತನ್ನ ತಂದೆಯನ್ನು ಕೊಲೆ ಮಾಡಲು ಸೂರತ್‌ನಿಂದ ಸಮಸ್ತಿಪುರಕ್ಕೆ ತೆರಳಿದ್ದ.

ಜಮೀನು ವಿವಾದದ ವಿಚಾರವಾಗಿ ಆರೋಪಿ ಶಿವಶಂಕರ್‌ ತನ್ನ ತಂದೆ ರಘುವೀರ್‌ ಜೊತೆ ಹಲವು ಬಾರಿ ಜಗಳವಾಡಿದ್ದ. ಇದೇ ವಿಚಾರವು ಆತನಿಗೆ ತನ್ನ ತಂದೆಯನ್ನು ಕೊಲೆ ಮಾಡುವ ಯೋಜನೆ ರೂಪಿಸಲು ಪ್ರಚೋದಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್‌ ಫೋನ್‌ ಸ್ವಿಚ್‌ ಆನ್‌ ಮಾಡಿ ಪತ್ನಿಗೆ ಕರೆ ಮಾಡಿದ್ದಾನೆ. ಇದರಿಂದ ಶಿವಶಂಕರ್‌ನನ್ನು ಪೊಲೀಸರು ಸೂರತ್‌ನಲ್ಲಿ ಪತ್ತೆಹಚ್ಚಿದರು. ಆತನ ಈ ಕರೆ ಪೊಲೀಸರಿಗೆ ಮಹತ್ವದ ಸುಳಿವು ನೀಡಿದ್ದು, ಇದರ ಆಧಾರದ ಮೇಲೆ ಬಲೆ ಬೀಸಿ ಶಿವಶಂಕರ್‌ನನ್ನು ಬಂಧಿಸಲಾಯಿತು.

ಕೊಲೆಗೆ ದೃಶ್ಯಂ ಚಿತ್ರ ಪ್ರೇರಣೆ!

ಬಾಲಿವುಡ್ ನಟ ಅಜಯ್ ದೇವಗನ್‌ ನಟಿಸಿರುವ ದೃಶ್ಯಂ ಸಿನಿಮಾ ಇದೇ ಹೆಸರಿನ ಮಲಯಾಳಂ ಚಿತ್ರದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ದೇವಗನ್‌ ನಟಿಸಿರುವ ವಿಜಯ್ ಸಾಲ್ಗಾಂವ್ಕರ್‌ ಪಾತ್ರವು ಕೊಲೆ ಮಾಡಿದ ಬಳಿಕ ತನ್ನ ಕುಟುಂಬವನ್ನು ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿಸಿ, ಘಟನೆಗಳ ಸಮಯಕ್ರಮವನ್ನು ಬದಲಿಸುವ ಮೂಲಕ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಾನೆ.

ಈ ಪ್ರಕರಣದಲ್ಲಿ, ತನ್ನ ತಂದೆಯ ಕೊಲೆಗೆ ಸಂಚು ರೂಪಿಸುವಾಗ ಶಿವಶಂಕರ್‌ ಈ ಸಿನಿಮಾದಿಂದ ಪ್ರೇರಣೆ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷವಾಗಿ, ಘಟನೆಗಳ ಸಮಯಕ್ರಮವನ್ನು ಗೊಂದಲಗೊಳಿಸುವುದು ಮತ್ತು ಡಿಜಿಟಲ್‌ ಸಾಕ್ಷ್ಯಗಳನ್ನು ತಪ್ಪಿಸುವುದಕ್ಕೆ ಸಿನಿಮಾದಲ್ಲಿ ನೀಡಿರುವ ಒತ್ತು ಆತನ ಮೇಲೆ ಪ್ರಭಾವ ಬೀರಿತ್ತು ಎಂದು ಪೊಲೀಸರು ಹೇಳಿದ್ದಾರೆ.

[pj-news-ticker]