ಶಿವಮೊಗ್ಗ: ಸಾರ್ವಜನಿಕರನ್ನ ಅಡ್ಡಗಟ್ಟಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ರೌಡಿ ಶೀಟರ್ ಒಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ರೌಡಿ ಶೀಟರ್ ಭವಿತ್ ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಕಳೆದ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭವಿತ್ ಮತ್ತು ಇತರೆ ಇಬ್ಬರು ಸಾರ್ವಜನಿಕರನ್ನು ಅಡ್ಡಗಟ್ಟಿ ಹಲ್ಲೆ ಮತ್ತು ಕೊಲೆಗೆ ಯತ್ನಿಸಿದ್ದಾರೆ. ಈ ಸಂಬಂಧ ಆರೋಪಿಗಳ ಹುಡುಕಾಟ ನಡೆಯುತಿತ್ತು. ರೌಡಿ ಶೀಟರ್ ಭವಿತ್ ಕುರಿತು ಮಾಹಿತಿ ಸಂಗ್ರಹಿಸಿ ಬಂಧನಕ್ಕೆ ತೆರಳಿದ್ದಾಗ ಆತ ಪೊಲೀಸ್ ಸಿಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪಿಎಸ್‌ಐ ಸುನಿಲ್ ಅವರು ಭವಿತ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಾಳು ಪೊಲೀಸ್ ಸಿಬ್ಬಂದಿ ಮತ್ತು ರೌಡಿ ಶೀಟರ್ ಭವಿತ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭವಿತ್ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್. ಆತನ ವಿರುದ್ಧ ಕೊಲೆ ಪ್ರಕರಣ, ಕೊಲೆ ಯತ್ನ, ರಾಬರಿ ಸೇರಿ ಒಟ್ಟು ಏಳು ಪ್ರಕರಣಗಳಿವೆ. ವಿನೋಬಗರ ಠಾಣೆ ವ್ಯಾಪ್ತಿಯಲ್ಲಿ ಭವಿತ್ ಕಾಲಿಗೆ ಗುಂಡು ಹಾರಿಸಲಾಗಿದೆ.