Breaking
Sun. Sep 8th, 2024

‘ ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ, ನನ್ನ ಕುರ್ಚಿ ಗಟ್ಟಿ ಆಗ್ತನೇ ಇರ್ತದೆ: ಬಿಜೆಪಿ-ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

By Mooka Nayaka News Aug 11, 2024
Spread the love

ಚಾಮರಾಜನಗರ: ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ. ನನ್ನ‌ ಕುರ್ಚಿ ಗಟ್ಟಿ ಆಗ್ತನೇ ಇರ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳುವ ಮೂಲಕ ಬಿಜೆಪಿ-ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಚೆಲುವ ಚಾಮರಾಜನಗರ’ “ಭರಚುಕ್ಕಿ ಜಲಪಾತೋತ್ಸವ” ಉದ್ಘಾಟಿಸಿ ಮಾತನಾಡಿದಮುಖ್ಯಮಂತ್ರಿ, ಈ ಜಿಲ್ಲೆಗೆ ಕಾಲಿಟ್ಟರೆ ಅಧಿಕಾರ ಹೋಗ್ತದೆ ಎನ್ನುವ ಮೂಢನಂಬಿಕೆ ಬಿತ್ತಿದ್ದರು. ಆದರೂ ನಾನು ಹತ್ತಕ್ಕೂ ಹೆಚ್ವು ಬಾರಿ ಜಿಲ್ಲೆಗೆ ಮುಖ್ಯಮಂತ್ರಿಯಾಗಿ ಬಂದಿದ್ದೇನೆ. ಇಲ್ಲಿಗೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ ಎಂದರು.

ನನ್ನ ಕುರ್ಚಿಯನ್ನು ಬಿಜೆಪಿ-ಜೆಡಿಎಸ್ ನವರು ಅಲ್ಲಾಡಿಸ್ತಾನೇ ಇದ್ದಾರೆ. ಅವರು ಎಷ್ಟೇ ಅಲ್ಲಾಡಿಸಿದ್ರೂ ನಾನು ಇನ್ನಷ್ಟು ಗಟ್ಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸ್ತಲೇ ಇರ್ತೇನೆ ಎಂದು ಬಿಜೆಪಿ-ಜೆಡಿಎಸ್ ಪಕ್ಷಗಳನ್ನು ಲೇವಡಿ ಮಾಡಿದರು. ಸಿದ್ದರಾಮಯ್ಯರ ಕಾಲುಗುಣ ಸರಿ ಇಲ್ಲ. ಅದಕ್ಕೆ ರಾಜ್ಯದಲ್ಲಿ ಮಳೆ ಇಲ್ಲ ಎಂದು ನನ್ನ ಬಗ್ಗೆ ಆರೋಪಿಸಿದ್ದರು. ಆದರೆ, ಈ ಬಾರಿ ಉತ್ತಮ ಮಳೆಯಾಗಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ನನ್ನ ಬಗ್ಗೆ ಮೂಡಿಸಿದ್ದ ಮತ್ತೊಂದು ಮೂಢನಂಬಿಕೆ ಕೂಡ ಸುಳ್ಳಾಗಿದೆ ಎಂದರು.

ಪರಿಸರ ಪ್ರವಾಸೋಧ್ಯಮ ಆಹ್ಲಾದಿಸಲು ಚಾಮರಾಜನಗರ ಉತ್ತಮ ಜಿಲ್ಲೆಯಾಗಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಎಲ್ಲ ನೆರವನ್ನೂ ನೀಡಲಿದೆ. ಅಗತ್ಯಬಿದ್ದರೆ ಹೊಸ ಪ್ರವಾಸೋದ್ಯಮ ನೀತಿಯನ್ನೂ ರಚಿಸಲಾಗುವುದು ಭರವಸೆ ನೀಡಿದರು.

ಬಿಳಿಗಿರಿರಂಗನಬೆಟ್ಟ, ಗಗನಚುಕ್ಕಿ ರೋಪ್ ವೇ, ಇಲ್ಲಿನ ದೇವಸ್ಥಾನ ಅಭಿವೃದ್ಧಿ, ಸುಬರ್ಣಾವತಿ ಜಲಾಶಯದಲ್ಲಿ ಜಲ ಸಾಹನ ಕ್ರೀಡೆಗಳನ್ನು ಆರಂಭಿಸುವುದೂ ಸೇರಿ ಎಲ್ಲಾ ಯೋಜನೆಗಳಿಗೂ ಸರ್ಕಾರ ಜೊತೆಗೆ ನಿಲ್ಲಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಮೂಲಕ ಆರ್ಥಿಕವಾಗಿ ವೇಗದ ಪ್ರಗತಿ ಕಾಣಿಸಲು ಎಲ್ಲಾ ಸಹಕಾರವನ್ನೂ ಸರ್ಕಾರ ನೀಡಲಿದೆ ಎಂದರು.

ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಿವರಾಜ ತಂಗಡಗಿ, ಸಂಸದರಾದ ಸುನಿಲ್ ಬೋಸ್ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

 

Related Post