ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಹಲವು ವಿವಾದಗಳಿಂದ ಸುದ್ದಿಯಾಗಿತ್ತು. ಇದೀಗ ವಿಜೇತರಿಗೆ ನೀಡಲಾದ ಪದಕಗಳ ಗುಣಮಟ್ಟ ಅತ್ಯಂತ ಕಳಪೆ ಮಟ್ಟದ್ದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಮೆರಿಕದ ಸ್ಕೇಟ್‌ಬೋರ್ಡರ್ ನೈಜಾ ಹ್ಯೂಸ್ಟನ್ ತಮ್ಮ ಕಂಚಿನ ಪದಕ ಕೆಲವೇ ದಿನಗಳಲ್ಲಿ ಮಾಸಿ ಹೋಗಿದೆ ಎಂದು ಆರೋಪಿಸಿದ್ದಾರೆ.
“ಕಂಚಿನ ಪದಕದ ಬಣ್ಣ ಈಗಾಗಲೇ ಮಾಸಿ ಹೋಹಿದೆ. ಪದಕದ ಮೇಲ್ಪದರ ಕಿತ್ತು ಬರಲಾರಂಭಿಸಿದೆ. ಇದು ನಾವು, ನೀವು ನಿರೀಕ್ಷಿಸಿದಷ್ಟು ಉತ್ತಮ ಗುಣಮಟ್ಟವನ್ನು ಹೊಂದಿಲ್ಲ. ಹಿಂದೆಂದು ಕೂಡ ಈ ರೀತಿಯ ಒಲಿಂಪಿಕ್ ಪದಕಗಳು ಕಂಡಿಲ್ಲ. ಇದು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿದೆ. ಇದನ್ನು ಜೋಪಾನವಾಗಿ ಇಡುವುದು ಹೇಗೆ ಎಂದು ತಿಳಿಯುತ್ತಿಲ್ಲ” ಎಂದು ನೈಜಾ ಹ್ಯೂಸ್ಟನ್ ವಿಡಿಯೊ ಮೂಲಕ ಹೇಳಿದ್ದಾರೆ.
ಪದಕದ ಜತೆ ಕಬ್ಬಿಣ ಮಿಶ್ರಣ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿಜೇತರಾದ ಕ್ರಿಡಾಳುಗಳಿಗೆ ನೀಡಲಾದ ಪದಕಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಮಾತ್ರವಲ್ಲದೆ ಈ ಬಾರಿ ಕಬ್ಬಿಣವೂ ಸೇರಿತ್ತು. ಪ್ಯಾರಿಸ್ ನಗರದ ಪ್ರಸಿದ್ಧ ಐಫೆಲ್ ಟವರ್ನ ಕಬ್ಬಿಣದ ತುಂಡುಗಳನ್ನು ಈ ಬಾರಿ ಕ್ರಾಂತಿಕಾರಿಯಾಗಿ ಪದಕದೊಂದಿಗೆ ವಿನ್ಯಾಸಗೊಳಿಸಲಾಗಿತ್ತು.
ಐಫೆಲ್ ಟವರ್ ನವೀಕರಣ ಕೆಲಸದ ವೇಳೆ ಕತ್ತರಿಸಲ್ಪಟ್ಟ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು ಇದನ್ನು ಒಲಿಂಪಿಕ್ಸ್ ಪದಕಗಳಲ್ಲಿ ಬಳಸಲಾಗಿತ್ತು. ಪ್ರತಿ ಪದಕವೂ 18 ಗ್ರಾಂ ಭಾರದ ಕಬ್ಬಿಣದ ತುಂಡನ್ನು ಒಳಗೊಂಡಿತ್ತು. ಇದೇ ಕಬ್ಬಿಣ ವಿಶ್ರಿತ ಮಾಡಿದ ಕಾರಣದಿಂದಲೂ ಪದಕದ ಗುಣಮಟ್ಟ ಕಳೆದುಕೊಂಡಿರುವ ಸಾಧ್ಯತೆ ಇದೆ. ಕೆಲವರು ಈ ಬಾರಿಯ ಚಿನ್ನದ ಪದಕದಲ್ಲಿ ಕೇವಲ ಶೇ.1ರಷ್ಟು ಮಾತ್ರ ಚಿನ್ನ ಇದೆ ಎಂದು ದೂರಿದ್ದಾರೆ.