ಚಂಡೀಗಢ: ಹರ್ಯಾಣ ರಾಜ್ಯದ ಮಹೇಂದ್ರಗಢ ಜಿಲ್ಲೆಯ ಉನ್ಹಾನಿ ಎಂಬ ಗ್ರಾಮದ ಬಳಿ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಕನಿನಾ ಪಟ್ಟಣದಲ್ಲಿ ವಾಹನವನ್ನು ಓವರ್‌ಟೇಕ್ ಮಾಡುವಾಗ ಬಸ್ ಪಲ್ಟಿಯಾಗಿದೆ.
ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ಮಹೇಂದ್ರಗಢ ಪೊಲೀಸ್ ವರಿಷ್ಠಾಧಿಕಾರಿ ಅರ್ಶ್ ವರ್ಮಾ ಪಿಟಿಐ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಚಾಲಕ ಪಾನಮತ್ತನಾಗಿದ್ದನೇ ಎಂದು ಕೇಳಿದಾಗ “ಚಾಲಕನನ್ನು ಬಂಧಿಸಲಾಗಿದ್ದು, ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ.ರಕ್ತ ಪರೀಕ್ಷೆ ಮಾದರಿ ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ಹೇಳಿದರು.
ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದರು. ಹರಿಯಾಣದ ಶಿಕ್ಷಣ ಸಚಿವೆ ಸೀಮಾ ತ್ರಿಖಾ ಅವರು ಮಹೇಂದ್ರಗಢಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.