ಶಿವಮೊಗ್ಗ: ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸಾಗರ ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ.
ರಂಜಿತಾ (22) ಮೃತಪಟ್ಟ ಮಹಿಳೆ. ಗದ್ದೆಯಲ್ಲಿ ಮೇವು ತರಲು ತೆರಳಿದ್ದ ವೇಳೆ ಘಟನೆ ನಡೆದಿದೆ.
ಪೊದೆಯಲ್ಲಿದ್ದ ಹಾವು ಮಹಿಳೆಗೆ ಕಚ್ಚಿದೆ. ಆದರೆ ಕೆಲಹೊತ್ತಿನ ಬಳಿಕ ಹಾವು ಕಚ್ಚಿರುವ ವಿಚಾರ ಬೆಳಕಿಗೆ ಬಂದಿದೆ. ಕುಟುಂಬಸ್ಥರು ನೋಡಿದಾಗ ಬಾಣಂತಿ ರಂಜಿತಾ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತ ಸಾವನ್ನಪ್ಪಿದ್ದಾರೆ.
ರಂಜಿತಾ ಅವರಿಗೆ ವರ್ಷದ ಹೆಣ್ಣು ಹಾಗೂ ನಾಲ್ಕು ತಿಂಗಳ ಹಸುಗೂಸಿತ್ತು. ಆಸ್ಪತ್ರೆಯ ಶವಾಗಾರದ ಬಳಿ ಮೃತಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.