Trending

ದೋಷ ನಿವಾರಣೆ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ: ಪೂಜಾರಿ ಬಂಧನ

Spread the love

ಬೆಂಗಳೂರು: ದೋಷ ನಿವಾರಣೆ ನೆಪದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಾಸನ ದೇವಸ್ಥಾನವೊಂದರ ಪೂಜಾರಿಯನ್ನು ಬಾಗಲಗುಂಟೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತನನ್ನು ಹಾಸನ ಜಿಲ್ಲೆ ಅರಸೀಕೆರೆ ನಿವಾಸಿ ದಯಾನಂದ್ (39) ಎಂದು ಗುರುತಿಸಲಾಗಿದೆ. ಈತ ಹಾಸನದ ಶಾಂತಿನಗರ ಸಮೀಪದ ಆದಿಶಕ್ತಿ ಪುರದಮ್ಮ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಎಂದು ತಿಳಿದುಬಂದಿದೆ,

ದೂರುದಾರ ಯುವತಿಯು ಆರೋಪಿ ಪೂಜಾರಿ ಇದ್ದ ದೇವಸ್ಥಾನದ ಭಕ್ತೆಯಾಗಿದ್ದು, ಆಗಾಗ ಹೋಗಿ ಬರುತ್ತಿದ್ದಳು. ಈ ವೇಳೆ, ದೂರುದಾರಳ ಹಸ್ತರೇಖೆ ನೋಡಿದ್ದ ಆರೋಪಿ ‘ನಿನಗೆ ವಿವಾಹ ಕಂಟಕವಿದೆ, ಅದರ ನಿವಾರಣೆಗಾಗಿ ಪೂಜೆ ಮಾಡುತ್ತೇನೆ ಎಂದಿದ್ದಾನೆ.

ಬಳಿಕ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ, ದೂರುದಾರಳಿಗೆ ಮಂತ್ರಿಸಿದ ನಿಂಬೆಹಣ್ಣು ನೀಡಿ 10 ಸಾವಿರ ರೂ. ಹಣ ಪಡೆದಿದ್ದ. ಮಂತ್ರಿಸಿದ ನಿಂಬೆಹಣ್ಣು ಪಡೆದ ಬಳಿಕ ಧನಾತ್ಮಕ ಬದಲಾವಣೆಗಳಾಗಿವೆ ಎಂದು ದೂರುದಾರಳು ಹೇಳಿಕೊಂಡಾಗ, ‘ಮಂತ್ರಿಸಿದ ದೇವರತಾಳಿ ನೀಡುತ್ತೇನೆ’ ಎಂದಿದ್ದ ಆರೋಪಿ, ಮೇ ತಿಂಗಳಿನಲ್ಲಿ ದೂರುದಾರಳನ್ನ ಹೆಚ್ಎಸ್ಆರ್ ಲೇಔಟಿನ ಬಳಿ ಕರೆಸಿಕೊಂಡಿದ್ದ. ಬಳಿಕ ತಾನೇ ಪಿ.ಜಿ ಬಳಿ ಡ್ರಾಪ್ ಮಾಡುವುದಾಗಿ ಕಾರಿನಲ್ಲಿ ಕೂರಿಸಿಕೊಂಡು ಬಲವಂತವಾಗಿ ದೇವರತಾಳಿಯನ್ನ ದೂರುದಾರಳ ಕತ್ತಿಗೆ ತೊಡಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ನಂತರ ಮಾರ್ಗಮಧ್ಯದಲ್ಲಿ ಕಾರು ನಿಲ್ಲಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

ಇದಾದ ಬಳಿಕವೂ ತನ್ನ ಚಾಳಿ ಮುಂದುವರೆಸಿದ್ದ ಆರೋಪಿ, ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಯುವತಿಯನ್ನ ಬೆದರಿಸಿ ಆಕೆಯ ಮೇಲೆ ಆಗಾಗ ಅತ್ಯಾಚಾರ ಎಸಗಿದ್ದ. ಜು.26ರಂದು ಎಲೆಕ್ಟ್ರಾನಿಕ್ ಸಿಟಿಗೆ ಬಂದಿರುವ ಆರೋಪಿ, ಯುವತಿಯನ್ನು ಮೆಜೆಸ್ಟಿಕ್ ಲಾಡ್ಜ್’ಗೆ ಕರೆದೊಯ್ದು ಅಲ್ಲಿಯೂ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ರೂ.86,000 ಹಣವನ್ನೂ ಸುಲಿಗೆ ಮಾಡಿದ್ದಾನೆ. ಆರೋಪಿಯ ಉಪಟಳ ತಾಳಲಾರದ ಯುವತಿ ಕೊನೆಗೆ ಬಾಗಲಗುಂಟೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಳು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.

 

 

[pj-news-ticker]