ಹುಬ್ಬಳ್ಳಿ: ತವರು ಮನೆಗೆ ಹೋಗಲು ಯಾವ ಮಹಿಳೆಯಾದರು ಒಲ್ಲೆ ಎನ್ನುತ್ತಾಳೆಯೆ? ಬಿಜೆಪಿಗೆ ಮರಳಲು ನಾನೇಕೆ ಒಲ್ಲೆ ಎನ್ನಲಿ. ತವರು ಮನೆಯಲ್ಲಿ ಕೆಲ ಸಹೋದರರು ಇಲ್ಲಸಲ್ಲದ ಸ್ಥಿತಿ ನಿರ್ಮಿಸಿದ್ದು, ಶೀಘ್ರ ಅದು ಸರಿಯಾಗಿ ಮತ್ತೆ ತವರಿಗೆ ಮರಳುವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಕುಟುಂಬದ ಕೈಯಲ್ಲಿಪಕ್ಷ ಸಿಲುಕಿದೆ. ಎಲ್ಲವೂ ಸರಿಯಾಗಲಿದೆ ಎಂಬ ನನಗೆ ವಿಶ್ವಾಸವಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆರು ತಿಂಗಳಿಂದ ಖಾಲಿಯಿತ್ತು, ಯಡಿಯೂರಪ್ಪ ಏನೋ ಮಾಡಿ ಶಾಸಕನಾಗಿದ್ದ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದು, ಇದು ಬಹಳ ದಿನ ಉಳಿಯುವುದಿಲ್ಲ ಎಂದರು.
ಕುಟುಂಬ ಹಿಡಿತಕ್ಕೆ ಪಕ್ಷ ಸಿಲುಕಬಾರದು ಎಂಬ ಪ್ರಧಾನಿ ಮೋದಿ ಆಶಯಕ್ಕೆ ವಿರುದ್ದವಾಗಿ ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿಯಿದೆ. ಯಡಿಯೂರಪ್ಪ ಕುಟುಂಬ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬುದನ್ನು ನಾನು ಹೇಳುತ್ತಿಲ್ಲ. ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ ಬಹಿಂಗವಾಗಿ ವಿಜಯೇಂದ್ರ ನಮ್ಮ ಭಿಕ್ಷೆಯಿಂದ ನೀನು ಗೆದ್ದಿದ್ದೀಯ ಎಂದಿದ್ದು, ಯಡಿಯೂರಪ್ಪ ಬಿಜೆಪಿಗೆ, ಡಿಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ವಿರುದ್ದ ಯಾವ ತೀರ್ಪು ಬರುತ್ತದೋ ಗೊತ್ತಿಲ್ಲ. ವ್ಯತಿರಿಕ್ತ ತೀರ್ಪು ಬಂದರೆ ಕೇಜ್ರಿವಾಲ್ ರೀತಿ ಭಂಡತನ ತೋರದೆ ಸಿಎಂ ಮರ್ಯಾದೆಯಿಂದ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಆಕಾಂಕ್ಷಿಗಳ ದೊಡ್ಡ ಪಟ್ಟಿಯಿದೆ. ಬಹಿರಂಗವಾಗಿ ಸಿಎಂ ಬೆಂಬಲ ಎನ್ನುವ ನಾಯಕರು, ಸಿಎಂ ಸ್ಥಾನ ಕ್ಕೆ ನಾನು ಸಿದ್ದ ಎನ್ನುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.