ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೀಡಾಗಿರುವ ಹಿರಿಯ ಪತ್ರಕರ್ತ ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತರಾದ ಶಶಿಧರ್ ಭಟ್ ಅವರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ, ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ್ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಮುತುವರ್ಜಿಯಿಂದ ಅವರ ಆರೈಕೆ ಮಾಡುವಂತೆ ತಿಳಿಸಿದ್ದೇನೆ. ಸಮಾಜದ ಒಳಿತಿಗಾಗಿ ನಿರ್ಭೀತ ಧ್ವನಿಯಾಗಿದ್ದ ಶಶಿಧರ್ ಭಟ್ಟರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ಪರವಾಗಿ ಯಾರೂ ಇಲ್ಲ: ಅಳಲು ತೋಡಿಕೊಂಡಿದ್ದ ಪತ್ರಕರ್ತ
ಇನ್ನು ಅನಾರೋಗ್ಯಕ್ಕೆ ತುತ್ತಾಗಿರುವ ಪತ್ರಕರ್ತ ಶಶಿಧರ್ ಭಟ್, ‘ಆಸ್ಪತ್ರೆಯ ಬೆಡ್ ಮೇಲಿಂದನೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿ, “ನಾನು ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿದ್ದೇನೆ. ಅನಾರೋಗ್ಯ ಸಮಸ್ಯೆ ಈಗ ನನ್ನ ಕಣ್ಣು ತೆರೆಸಿದೆ. ಆಸ್ಪತ್ರೆಯ ಜಗತ್ತು ಎಷ್ಟು ಕ್ರೂರವಾದದ್ದು ಎಂಬುದು ಅರಿವಿಗೆ ಬಂದಿದೆ. ಹಾಗೆಯೇ ನಮ್ಮ ಸುತ್ತ ಇರುವವರು ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ. ಪ್ರೀತಿ, ನಂಬಿಕೆ ಸಂಬಂಧ ಎಲ್ಲ ಸುಳ್ಳು ಎಂಬುದು ಅರ್ಥವಾಗಿದೆ, ಧನ್ಯವಾದಗಳು ”ಎಂದು ನೋವಿನಿಂದ ಹೇಳಿದ್ದರು.
ಶಶಿಧರ್ ಭಟ್ ಅವರ ಈ ಪೋಸ್ಟ್ ಗೆ ಸಾವಿರಾರು ಅಭಿಮಾನಿಗಳು, ಸಹ ಪತ್ರಕರ್ತರು ಕಾಮೆಂಟ್ ಮೂಲಕ ಬೆಂಬಲ ನೀಡಿದ್ದರು. ಪರಸ್ಪರ ಅವರ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ನಿಮ್ಮ ಜೊತೆ ನಾವೂ ಇದ್ದೇವೆ ಎಂಬ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಲೇ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.