ಹಾವೇರಿ: ರಾಜ್ಯದಲ್ಲಿ ಭೀತಿ ಹುಟ್ಟಿಸಿರುವ ಡೆಂಘೀ ಜ್ವರದ ನಡುವೆಯೇ ಹಾವೇರಿಯಲ್ಲಿ ಇಲಿ ಜ್ವರ ಪತ್ತೆಯಾಗಿದ್ದು, ಸೋಂಕಿಗೀಡಾಗಿರುವ 12 ವರ್ಷದ ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಹಾವೇರಿ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಸದ್ಯ ಬಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ 15 ದಿನದಿಂದ ಜ್ವರದಿಂದ ಬಳಲುತ್ತಿದ್ದ 12 ವರ್ಷದ ಬಾಲಕನಿಗೆ ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಬಾಲಕನಿಗೆ ಜಾಂಡೀಸ್ ಇದೆ ಎಂದು ರಕ್ತ ತಪಾಸಣೆ ಮಾಡಲಾಗಿದ್ದು ವರದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ.
ಇಲಿ ಜ್ವರ ದೃಢ ಪಡುತ್ತಿದ್ದಂತೆ ಆರೋಗ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಬಾಲಕನನ್ನು ಆಸ್ಪತ್ರೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ನೀಡುವ ಕಾರ್ಯ ಮಾಡಿದೆ.
ಬಾಲಕನ ಆರೋಗ್ಯ ಸ್ಥಿರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇಲಿ ಜ್ವರ ಪತ್ತೆ ಬೆನ್ನಲ್ಲೇ ಆರೋಗ್ಯಾಧಿಕಾರಿಗಳು ಮಹತ್ವದ ಸಭೆ ನಡೆಸಿದ್ದು ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇಲಿ ಜ್ವರದ ಲಕ್ಷಣಗಳು
ಸಾಮಾನ್ಯವಾಗಿ ಈ ವ್ಯಕ್ತಿಯು ಸೋಂಕಿಗೆ ಒಳಗಾಗಿರುವ ಕಚ್ಚಿದ ಇಲಿ ಪ್ರಕಾರವನ್ನು ಅವಲಂಬಿಸಿ ಪ್ರತಿ ವ್ಯಕ್ತಿಗೆ ರೋಗಲಕ್ಷಣಗಳು ವಿಭಿನ್ನವಾಗಿರುತ್ತವೆ. ಕಣ್ಣಿನ ಉರಿಯೂತ, ಚರ್ಮದ ಸೋಂಕು, ಶೀತ, ಜ್ವರ, ವಾಂತಿ, ತಲೆನೋವು ಮತ್ತು ಸ್ನಾಯು ನೋವುಗಳು. ಕೀಲುಗಳು ನೋವಿನಿಂದ ಊದಿಕೊಳ್ಳಬಹುದು. ಕೈಕಾಲುಗಳ ಮೇಲೆ ಹುಣ್ಣುಗಳಾಗಬಹುದು ಎಂದು ತಜ್ಞರು ಹೇಳಿದ್ದಾರೆ.