ಹುಬ್ಬಳ್ಳಿ: ನನಗೆ ರಾಜಕೀಯ ನಿವೃತ್ತಿಗೆ ಬಿಜೆಪಿ ನಾಯಕರು ಹೇಳುತ್ತಾರೆ. ನಾಲ್ಕು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಪ್ರಧಾನಿ ಆಗಿರುವ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಬಿಡುತ್ತಾರೆಯೇ? ನಾಲ್ಕು ಬಾರಿ ಸಂಸದರಾಗಿರುವ, ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ ಜೋಶಿ ರಾಜಕೀಯ ಬಿಡುತ್ತಾರೆಯೇ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿಯವರೆಗೆ ಜನರ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ರಾಜಕೀಯದಲ್ಲಿ ಎಲ್ಲರೂ ಇರಬೇಕಾಗುತ್ತದೆ. ಏಣಿ ಹತ್ತಿ ನಿಚ್ಚಣಿಕೆ ತೆಗೆದು ಹಾಕಿದರು ಅಂತಾರಲ್ಲ ಅದೇ ರೀತಿ ಜೋಶಿಯವರದ್ದು. ನನ್ನ ಹಿರಿತನದ ಮೇಲೆ ಸಚಿವ ಸ್ಥಾನ ದೊರೆತಿದೆ. ಜೋಶಿಯವರು ಇತ್ತೀಚೆಗೆ ಸುಳ್ಳು ಹೇಳುವುದನ್ನು ಕಲಿತಂತಿದೆ. ನಾನು ಬಿ.ಎಲ್. ಸಂತೋಷ, ಪ್ರಹ್ಲಾದ ಜೋಶಿ ಅವರನ್ನು ಟೀಕಿಸಿದ್ದೇನೆ ವಿನಾ ಇಡೀ ಬ್ರಾಹ್ಮಣ ಸಮಾಜವನ್ನಲ್ಲ. ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರ ಜನತೆಗೊಂದು, ಸುಪ್ರೀಂ ಕೋರ್ಟ್ ಮುಂದೆ ಒಂದು ಹೇಳಿಕೆ ನೀಡಿ ಜನರಿಗೆ ಮೋಸ ಮಾಡಿದೆ ಎಂದರು.