ಕಣ್ಣೂರು: ಉತ್ತರ ಕೇರಳ ಜಿಲ್ಲೆಯ ತಲಶ್ಶೇರಿ ಬಳಿ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 86 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತನನ್ನು ವೆಲಾಯುಧನ್ ಎಂದು ಗುರುತಿಸಲಾಗಿದೆ.
ಜನವಸತಿ ಪ್ರದೇಶದಲ್ಲಿ ಬಿದ್ದಿದ್ದ ತೆಂಗಿನ ಕಾಯಿ ಸಂಗ್ರಹಿಸಲು ಹೋಗಿದ್ದ ವೇಳೆ ಪತ್ತೆಯಾದ ಬಾಂಬ್ ನ್ನು ಎತ್ತಿಕೊಂಡು ಅದನ್ನು ತೆರೆಯಲು ಪ್ರಯತ್ನಿಸಿದಾಗ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೇಲಾಯುಧನ್ ಅವರನ್ನು ತಲಶ್ಶೇರಿ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಸ್ಟೀಲ್ ಬಾಂಬ್ ಎಂದು ಕಂಡುಬಂದಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಮಧ್ಯಾಹ್ನ 12-45 ರ ಸುಮಾರಿನಲ್ಲಿ ಘಟನೆ ನಡೆದಿದ್ದು, ಬಾಂಬ್ ನ್ನು ಬಿಸಾಡಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರಬಹುದು. ಸ್ಫೋಟಕ ಪತ್ತೆಯಾದ ಪ್ರದೇಶದಲ್ಲಿ ಬಾಂಬ್ ನಿಷ್ಕ್ರೀಯ ದಳ ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ ಎಂದು ಅಧಿಕಾರಿ ಹೇಳಿದರು.