ಸಾಗರ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕಸಬ ಹೋಬಳಿಯ ಬಳಸಗೋಡು ಗ್ರಾಮದ ಜಮೀನಿನ ಆರ್‌ಟಿಸಿ ಪ್ರತಿಯನ್ನು ನೀಡುವ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಟೆಂಡರ್ ಬಸವರಾಜ್ ಗುರುವಾರ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಈ ಸಂಬಂಧ ಪಟ್ಟಣದ ಶಿವಪ್ಪ ನಾಯಕ ನಗರದ ಆಸಿನ್‌ರವರು ಕಸಬಾ ಹೋಬಳಿಯ ಬಳಸಗೋಡು ಗ್ರಾಮದ ಜಮೀನಿನ ಪಹಣಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಲುವಾಗಿ ತಾಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ ಜೂ. 5ರಂದು ಸ್ನೇಹಿತ ನವೀನ್‌ರೊಂದಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಅಟೆಂಡರ್ ಬಸವರಾಜ್ ದಾಖಲಾತಿಗಳ ಜೆರಾಕ್ಸ್ ಮಾಡಿಸುವುದು, ಚಲನ್ ಕಟ್ಟುವುದು ಇತ್ಯಾದಿಗಳಿಗೆ ದೂರುದಾರ ಆಸಿನ್ ಬಳಿ ರೂ. 1500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂದೇ ಮಧ್ಯಾಹ್ನ ಲಂಚದ ಹಣವನ್ನು ಪಡೆದ ಅಟೆಂಡರ್ ಬಸವರಾಜ್, ದೂರುದಾರರ ಬಳಿ ನೀನು ಕೊಟ್ಟಿರುವುದು ಶಿರಸ್ತೇದಾರರಿಗೆ ಕೊಟ್ಟು ಪಹಣಿಗೆ ಸಹಿ ಮಾಡಿಸುತ್ತೇನೆ. ನನಗೆ ರೂ. 2000 ಕೊಡಬೇಕು ಎಂದು ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಎರಡೂ ಘಟನೆಗಳನ್ನು ದೂರುದಾರರ ಸ್ನೇಹಿತ ನವೀನ್ ಮೊಬೈಲ್‌ನಲ್ಲಿ ವಿಡಿಯೋ ದಾಖಲೆ ಮಾಡಿಕೊಂಡು ಲೋಕಾಯುಕ್ತಕ್ಕೆ ಜೂ. 6ರಂದು ದೂರು ಸಲ್ಲಿಸಿದ್ದರು.
ಅದರ ಹಿನ್ನೆಲೆಯಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ದಾಖಲಾತಿ ವಿಭಾಗದ ಆರ್‌ಆರ್‌ಟಿ ಶಾಖೆಯಲ್ಲಿ ಅಟೆಂಡರ್ ಬಸವರಾಜ್ ದೂರುದಾರ ಆಸಿನ್‌ರಿಂದ ಲಂಚ ಹಣ ರೂ. 2000 ಪಟೆಯುತ್ತಿರುವಾಗಿ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿ ವೇಳೆ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ, ಸಿಬ್ಬಂದಿಗಳಾದ ಯೋಗೇಶ್, ಹೆಚ್.ಜಿ. ಸುರೇಂದ್ರ, ಬಿ.ಟಿ ಚನ್ನೇಶ, ರಘುನಾಯ್ಕ, ಪುಟ್ಟಮ್ಮ, ಗಂಗಾಧರ, ಪ್ರದೀಪ್, ಜಯಂತ್ ಹಾಜರಿದ್ದರು.