ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದೆ. ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಕಾಡಾನೆಗಳು ದಾಳಿಯಾಗಿದೆ.
ಕಳೆದ ಒಂದು ತಿಂಗಳಿನಿಂದ ರೈತರ ತೋಟ, ಗದ್ದೆಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿದೆ. ಪ್ರತಿನಿತ್ಯ ಕಾಡಾನೆಗಳ ಹಾವಳಿಗೆ ಲಕ್ಷಾಂತರ ರೂ ಬೆಳೆ ನಾಶವಾಗಿದೆ. ಕಾಡಾನೆ ಹಾವಳಿಯಿಂದ ಭತ್ತ, ಮೆಕ್ಕೇಜೋಳ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ರೈತರ ಬೆಳೆ ನಾಶವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಅನ್ನದಾತರ ಆಕ್ರೋಶ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ವೀರಗಾರನ ಬೈರನಕೊಪ್ಪ ಬಳಿ ಕಾಡಾನೆಯೊಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ. ಆನೆಗಳ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆ ದಾಳಿಗೆ ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡುವಂತೆ ರೈತರ ಒತ್ತಾಯಿಸಿದ್ದಾರೆ.