ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್ ವಿಚಾರಣೆ ಮಾಡಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್, ಹಾಜರಾತಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿನಾಯಿತಿ ನೀಡಿದೆ. ಜೂ.7ರಂದು ತಪ್ಪದೇ ಕೋರ್ಟ್‌ಗೆ ಹಾಜರಾಗಲು ಸೂಚನೆ ನೀಡಿದೆ.
ರಾಹುಲ್ ಗಾಂಧಿ ಅವರು ಚುನಾವಣಾ ನಿಮಿತ್ತ ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಸಮಯ ವಿನಾಯಿತಿ ನೀಡಬೇಕು ಎಂದು ರಾಹುಲ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಇಂದು ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಲಾಗಿತ್ತು.
ರಾಹುಲ್ ಗಾಂಧಿ ವಕೀಲರ ಅರ್ಜಿಗೆ ಹಾಜರಾತಿಗೆ ವಿನಾಯಿತಿ ನೀಡದಂತೆ ಬಿಜೆಪಿ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಒಮ್ಮೆ ಹಾಜರಾದ ನಂತರ ವಿನಾಯಿತಿ ನೀಡಬಹುದು ಆದರೆ ಹಾಜರಾತಿಗೆ ಮೊದಲೇ ಪದೇಪದೆ ವಿನಾಯಿತಿ ನೀಡುವಂತಿಲ್ಲ ಎಂದು ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ವಾದ ಮಂಡನೆ ಮಾಡಿದ್ದಾರೆ. ಒಮ್ಮೆ ಹಾಜರಾಗುತ್ತಾರೆಂದು ಭರವಸೆ ನೀಡಿದ ನಂತರ ಉಲ್ಲಂಘಿಸುವಂತಿಲ್ಲ. ಹೀಗಾಗಿ ವಾರಂಟ್ ಹೊರಡಿಸಲು ಬಿಜೆಪಿ ಪರ ವಕೀಲರ ಮನವಿ ಮಾಡಿದ್ದರು.
ರಾಹುಲ್ ಗಾಂಧಿ ಪಕ್ಷದ ಯಾವುದೇ ಹುದ್ದೆಯಲ್ಲಿಲ್ಲ. ಜಾಹೀರಾತಿನಲ್ಲಿ ಫೋಟೋ ಹಾಕಿರುವುದಕ್ಕೆ ಆರೋಪಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಪರ ವಕೀಲ ಎಸ್.ಎ.ಅಹ್ಮದ್ ವಾದ ಮಂಡಿಸಿದ್ದಾರೆ. ಸಮನ್ಸ್ ಜಾರಿ ನಂತರ ಇದನ್ನು ಚರ್ಚಿಸಿ ಉಪಯೋಗವಿಲ್ಲ ಎಂದು ಹೇಳಿದ್ದಾರೆ.