ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ ಮನೆಗೆ ಮಂಗಳವಾರ ಸಿಐಡಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಪ್ರಕರಣವನ್ನು ಸರಕಾರ ಇಂದು ಸಿಐಡಿಗೆ ತನಿಖೆಗೆ ವಹಿಸಿದ ಬೆನ್ನಲ್ಲೇ ಡಿವೈಎಸ್ಪಿ ಮೊಹಮ್ಮದ್ ರಫಿ ನೇತೃತ್ವದಲ್ಲಿ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ತಂಡ ಮನೆಗೆ ಭೇಟಿ ನೀಡಿ, ಬಳಿಕ ವಿನೋಬಾ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಚಂದ್ರಶೇಖರ ಪತ್ನಿ ಹೇಳಿಕೆ ನೀಡಿದ್ದು, ‘ಸಿಐಡಿ ಅಧಿಕಾರಿಗಳು ಬಂದಿದ್ದರು.ಸುಮಾರು 45 ನಿಮಿಷ ವಿಚಾರಣೆ ನಡೆಸಿದರು. ಮನೆಯಲ್ಲಿದ್ದ ಪದ್ಮನಾಭ ಹೆಸರಿನ ಪೇನ್ ಡ್ರೈವ್ ತಗೆದುಕೊಂಡು ಹೋಗಿದ್ದಾರೆ. ಲ್ಯಾಪ್ ಟಾಪ್ ಜತೆಗಿದ್ದ ಪೆನ್ ಡ್ರೈವ್ ನಲ್ಲಿ ಏನಿದೆ ಎಂಬುದು ನಮಗೂ ತಿಳಿಯಬೇಕಿದೆ. ಏನೂ ತಿಳಿಸದೆ ಪೆನ್ ಡ್ರೈವ್ ತಗೆದುಕೊಂಡು ಹೋಗಿದ್ದಾರೆ. ಡೆತ್ ನೋಟ್ ಹಾಗೂ ಡೆತ್ ನೋಟ್ ಬರೆದ ಪೆನ್ ಕೂಡ ತೆಗೆದುಕೊಂಡು ಹೋಗಿದ್ದಾರೆ’ಎಂದರು.
‘ಪೆನ್ ಡ್ರೈವ್ ನಲ್ಲಿರುವ ಅಂಶ ಡಿಲಿಟ್ ಮಾಡುವ ಸಂಭವ ಇದೆ. ಅದರಲ್ಲಿ ಏನಿದೆ ಎನ್ನುವುದು ನಮಗೆ ತೋರಿಸಬೇಕು. ಸಿಐಡಿ ಅಧಿಕಾರಿಗಳು ನಮ್ಮ ಮನೆಯವರ( ಚಂದ್ರಶೇಖರ) ಸ್ವಭಾವ ಕೇಳಿದರು. ದಕ್ಷ ಅಧಿಕಾರಿ ಎನ್ನುವುದು ಅವರಿಗೂ ಮನವರಿಕೆ ಆಗಿದೆ’ ಎಂದು ಹೇಳಿದ್ದಾರೆ.