ಹಾವೇರಿ: ಜೆಡಿಎಸ್ ಬಿಜೆಪಿಯವರು ಕಾಂಗ್ರೆಸ್ ಸೋಲಿಸಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಕೋಮುವಾದಿ ಪಕ್ಷ, ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಲ್ಲ ಎಂದು ದೇವೆಗೌಡರು ಬಿಜೆಪಿ, ಮೋದಿಯವರನ್ನ ಬೈಯುತ್ತಿದ್ದರು. ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸಲ್ಮಾನ ಆಗಿ ಹುಟ್ಟುತ್ತೇನೆ, ಮೋದಿ ಪ್ರಧಾನಿ ಆದರೆ ದೇಶ ಬಿಡುತ್ತೇನೆಂದು ದೇವೆಗೌಡರು ಹೇಳಿದ್ದರು. ಖಾಲಿ ಚೊಂಬು ಮೋದಿಯವರ ಸರಕಾರ ಕೊಟ್ಟಿಲ್ಲ, ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ರಾಜ್ಯಕ್ಕೆ ಇವತ್ತು ದೊಡ್ಡ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಪರಿಹಾರ ಕೊಡಿಸಲು ಪ್ರಹ್ಲಾದ್ ಜೋಶಿ ಪ್ರಯತ್ನ ಮಾಡಿಲ್ಲ. ರಾಜ್ಯದ ಹಿತ ಕಾಯುವ ಕೆಲಸ ಮಾಡಿಲ್ಲ. 25 ಸಂಸದರು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾತನಾಡಲಿಲ್ಲ. ಮೋದಿಯವರು ರಾಜ್ಯಕ್ಕೆ ಮಾಡಿದ್ದು ದೊಡ್ಡ ಮೋಸ. ಇವತ್ತಿನವರೆಗೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಇದು ಮೋದಿಯವರು ರಾಜ್ಯಕ್ಕೆ ಮಾಡಿದ ದೊಡ್ಡ ಅನ್ಯಾಯ. ಮೋದಿಯವರ ಬಳಿ ಮಾತಾಡಲು ಪ್ರಹ್ಲಾದ್ ಜೋಶಿಯವರಿಗೆ ಭಯ ಎಂದು ಟೀಕೆ ಮಾಡಿದರು.
ಬರಗಾಲದಿಂದ ನಷ್ಟವಾಗಿದೆ, ರೈತರು ಕಷ್ಟದಲ್ಲಿದ್ದಾರೆ. 2014ರಲ್ಲಿ ಮೋದಿಯವರು ಹೇಳಿದ್ದರು, ಪ್ರತಿ ಕುಟುಂಬಕ್ಕೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ಧರು ಇದು ಮೊದಲನೆ ಸುಳ್ಳು. 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿವಿ ಅಂದಿದ್ದರು. ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ, ಬೊಂಡಾ ಮಾರಲು ಹೋಗಿ ಎಂದು ಮೋದಿಯವರು ಹೇಳುತ್ತಾರೆ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಶ್ರೀಮಂತರ ಪರ ಮೋದಿಯವರು ಕೆಲಸ ಮಾಡಿದ್ದಾರೆ ಎಂದರು.
ಬಿಜೆಪಿಯವರು ನಾವು ಗೆಲ್ಲುತ್ತೇವೆ ಎನ್ನುವ ಅಹಂನಲ್ಲಿದ್ದಾರೆ. ಚುನಾವಣೆ ಬಂದಾಗ ಮೋದಿಯವರಿಗೆ ಕರ್ನಾಟಕ ನೆನಪಾಗುತ್ತದೆ. ಮತ ಕೇಳಲು ಚುನಾವಣಾ ವೇಳೆ ಮೋದಿಯವರು ಬರುತ್ತಾರೆ, ಎಲ್ಲಿಯೂ ಮೋದಿಯವರ ಅಲೆಯಿಲ್ಲ, ರಾಜ್ಯದಲ್ಲಿ ಗ್ಯಾರಂಟಿ ಅಲೆಯಿದೆ. ಬಿಜೆಪಿಯವರು ಮೋದಿ ಅಲೆಯಲ್ಲಿ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.