ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅವರ ಮನೆಯಲ್ಲಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಅವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಬ್ಯಾಂಕ್ ನವರು ಅವರ ಮನೆಯನ್ನು ಇತ್ತೀಚೆಗೆ ಬಂದು ಸೀಜ್ ಮಾಡಿದ್ದರು ಎನ್ನಲಾಗುತ್ತಿದ್ದು, ಇದರಿಂದ ಮನನೊಂದಿದ್ದರು ಎನ್ನಲಾಗಿದೆ.
ರಾಜಾಜಿನಗರದ ಜೆಟ್ ಲಾಗ್ ಬಾರ್ & ರೆಸ್ಟೋರೆಂಟ್ ನ ಮಾಲೀಕರಾಗಿದ್ದ ಅವರು ಉದ್ಯಮಿಯಾಗಿ ಹಾಗೂ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಅಪ್ಪು & ಪಪ್ಪು, ಸ್ನೇಹಿತರು, ರಾಮ್ ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿ ಗಮನ ಸೆಳೆದಿದ್ದರು.
ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಅವರ ಮೃತದೇಹ ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.