ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಇಂದು ವಿಧಿವಶರಾಗಿದ್ದಾರೆ.
ಅನಾರೋಗ್ಯ ಕಾರಣ 67 ವರ್ಷದ ಎಸ್ ಕೆ ಜೈನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎಸ್ ಕೆ ಜೈನ್ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಎಸ್ ಕೆ ಜೈನ್ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಡಾ ಸುರೇಂದ್ರ ಕುಮಾರ್ ಜೈನ್ (ಎಸ್ ಕೆ ಜೈನ್) ಅವರು 1957ರ ಅಕ್ಟೋಬರ್ 13ರಂದು ಜನಿಸಿದ್ದರು. 2024ರ ಏಪ್ರಿಲ್ 12ರ ಸಂಜೆ 6:46ಕ್ಕೆ ಜೈನ್ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡದವರಾಗಿದ್ದು, ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ.
ಅವರಿಗೆ ಶ್ವಾಸಕೋಶದ ಸೋಂಕು ಇತ್ತು. ಶ್ವಾಸಕೋಶದಲ್ಲಿ ನೀರು ಶೇಖರಣೆಗೊಂಡು ದೇಹಕ್ಕೆಲ್ಲಾ ಹರಡಿತು. ಮಾರ್ಚ್ 18ರಂದು ಸಂಜೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಸಂತೋಷ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.