Trending

ಶಿವಮೊಗ್ಗದ 70 ಮಂದಿ ಸೇರಿ ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಜನರ ಬಂಧನ

Spread the love

ಶಿವಮೊಗ್ಗ : ವಿದೇಶದಲ್ಲಿ ವ್ಯಾಪಾರ ಮಾಡುವ ಅವಕಾಶದ ಆಮಿಷವೊಡ್ಡಿ ಏಜೆಂಟರಿಂದ ವಂಚನೆಗೊಳಗಾದ ಕರ್ನಾಟಕದ 95 ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಜನರು ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಮಂದಿ ಹಾಗೂ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯ 25 ಜನರನ್ನು ಅಲ್ಲಿನ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಬೆನಿ ಮತ್ತು ಕಿಸಂಗಾನಿ ನಗರಗಳಿಂದ ರಾಜಧಾನಿ ಕಿನ್ಶಾಸಾಗೆ ಸ್ಥಳಾಂತರಿಸಲಾಗಿದ್ದು, ಗಡೀಪಾರು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ವಿದೇಶದಲ್ಲಿ ವ್ಯಾಪಾರ ನಡೆಸಲು ಉತ್ತಮ ಅವಕಾಶವಿದೆ ಎಂದು ನಂಬಿಸಿದ ಏಜೆಂಟರು ಪ್ರತಿಯೊಬ್ಬರಿಂದ ತಲಾ ₹5 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಹಣ ಪಡೆದ ಬಳಿಕ ಏಜೆಂಟರು ಪರಾರಿಯಾಗಿದ್ದು, ವಿದೇಶಕ್ಕೆ ತೆರಳಿದ್ದ ಹಕ್ಕಿಪಿಕ್ಕಿ ಸಮುದಾಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಕಲಿ ದಾಖಲೆಗಳ ಬಳಕೆ ಹಾಗೂ ಪ್ರವಾಸಿ ವೀಸಾದಲ್ಲಿ ವ್ಯಾಪಾರ ಚಟುವಟಿಕೆ ನಡೆಸಿರುವುದು ಬಂಧನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಕಾಂಗೋದಲ್ಲಿರುವ 200ಕ್ಕೂ ಹೆಚ್ಚು ಕನ್ನಡಿಗರಲ್ಲಿ ಆತಂಕ

95 ಮಂದಿ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಕಾಂಗೋದ ವಿವಿಧ ನಗರಗಳಲ್ಲಿ ನೆಲೆಸಿರುವ 200ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಸಮುದಾಯದವರಲ್ಲಿ ಆತಂಕ ಮನೆಮಾಡಿದೆ. ಜೀವಭಯದಿಂದ ದೇಶ ತೊರೆದು ಭಾರತಕ್ಕೆ ಮರಳಲು ಅವರು ಪ್ರಯತ್ನಿಸುತ್ತಿದ್ದಾರೆ. ಬಂಧಿತರ ಕುಟುಂಬಸ್ಥರು ತಮ್ಮವರ ಸುರಕ್ಷತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಕ್ಷಣ ಬಂಧಿತರನ್ನು ಭೇಟಿ ಮಾಡಿ ಅಗತ್ಯ ಕಾನೂನು ನೆರವು, ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ವಂಚಕ ಏಜೆಂಟರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ವಿದೇಶದಲ್ಲಿ ಉದ್ಯೋಗ ಹಾಗೂ ವ್ಯಾಪಾರದ ಆಮಿಷವೊಡ್ಡಿ ಹಣ ಪಡೆದು ಪರಾರಿಯಾಗಿರುವ ಏಜೆಂಟರ ವಿರುದ್ಧ ವಂಚನೆ ಮತ್ತು ಮಾನವ ಕಳ್ಳಸಾಗಣೆ ಆರೋಪಗಳಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿತರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು, ವಂಚನೆಗೊಳಗಾದ ಬಡ ಬುಡಕಟ್ಟು ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗೋದಲ್ಲಿ ಬಂಧನಕ್ಕೊಳಗಾಗಿರುವ 95 ಜನರನ್ನು ಮಾತ್ರವಲ್ಲದೆ, ಅಲ್ಲಿರುವ ಎಲ್ಲ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿ ಅವರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

 

[pj-news-ticker]