ಜೈಪುರ: ‘ಚಿತ್ತೋರಗಢದ ಬಪ್ಪಿ ಲಾಹಿರಿʼ ಎಂದೇ ಖ್ಯಾತಿಯಾಗಿರುವ ʼಗೋಲ್ಡ್ ಮ್ಯಾನ್ʼ ಕನ್ಹಯ್ಯಾಲಾಲ್ ಖಾತಿಕ್ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ವರದಿಯಾಗಿದೆ.
ರಾಜಸ್ಥಾನದ ಚಿತ್ತೋರ್ಗಢದಲ್ಲಿ ಉದ್ಯಮಿಯಾಗಿರುವ ಕನ್ಹಯ್ಯಾಲಾಲ್ ಖಾತಿಕ್ ಹಣ್ಣಿನ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಚಿನ್ನದ ಮೇಲಿನ ಅಪಾರ ಒಲವಿನ ಕಾರಣದಿಂದ ಅವರು ಯಾವಾಗಲೂ ಕೆಜೆ ಗಟ್ಟಲೆ ಚಿನ್ನವನ್ನು ಧರಿಸಿಕೊಂಡೇ ಸುತ್ತಾಡುತ್ತಾರೆ. ಇದರಿಂದ ಅವರಿಗೆ ಚಿತ್ತೋರಗಢದ ‘ಬಪ್ಪಿ ಲಾಹಿರಿ’ ಎನ್ನುವ ಹೆಸರು ಬಂದಿದೆ.
ಕನ್ಹಯ್ಯಾಲಾಲ್ ಅವರ ಫೋನಿಗೆ ಇತ್ತೀಚೆಗೆ ಮಿಸ್ಡ್ ಕಾಲ್ವೊಂದು ಬಂದಿದೆ. ಇದರ ಬೆನ್ನಲ್ಲೇ ಅದೇ ನಂಬರ್ನಿಂದ ವಾಟ್ಸಾಪ್ ಕರೆ ಬಂದಿದೆ. ಅಪರಿಚಿತ ಎರಡು ಸಂಖ್ಯೆಗಳಿಗೂ ಉತ್ತರ ನೀಡಿದ್ದಾಗ, ವಾಟ್ಸಾಪ್ಗೆ ಬೆದರಿಕೆಯ ಆಡಿಯೋ ಸಂದೇಶ ಬಂದಿದೆ.
5 ಕೋಟಿ ರೂಪಾಯಿ ನೀಡಬೇಕೆಂದು ಬೆದರಿಕೆ ಹಾಕಲಾಗಿದೆ. ಇಲ್ಲದಿದ್ರೆ ಚಿನ್ನ ಧರಿಸುವ ಪರಿಸ್ಥಿತಿಯಲ್ಲಿ ನೀವು ಉಳಿಯುವುದಿಲ್ಲವೆಂದು” ಬೆದರಿಕೆ ಹಾಕಲಾಗಿದೆ.
ಈ ಬಗ್ಗೆ ಕನ್ಹಯ್ಯಾಲಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ಯಾಂಗ್ಸ್ಟರ್ ರೋಹಿತ್ ಗೋಡರಾ ಅವರ ಗ್ಯಾಂಗ್ನ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ. ಬಿಕಾನೇರ್ನ ಲೂನಾಕರನ್ನ ನಿವಾಸಿ ಗೋದಾರಾ ಕೆನಡಾದಲ್ಲಿದ್ದಾರೆ ಎನ್ನಲಾಗಿದೆ. ಈತನ ವಿರುದ್ಧ ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ 32ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಕನ್ಹಯ್ಯಾಲಾಲ್ ಅವರು ಆರಂಭದಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದರು. ಆ ಬಳಿಕ ಹಣ್ಣಿನ ಉದ್ಯಮವನ್ನು ಆರಂಭಿಸಿದರು. ಪ್ರತಿದಿನ ಅವರು 3.5 ಕೆಜಿ ಚಿನ್ನವನ್ನು ಧರಿಸಿಕೊಂಡೇ ಮನೆಯಿಂದ ಹೊರ ಬರುತ್ತಾರೆ.
ಸದ್ಯ ಪೊಲೀಸರು ಬೆದರಿಕೆ ಕರೆಯನ್ನು ಆಧರಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
