Trending

ಸಾಲ ತೀರಿಸಲು ದೊಡ್ಡಮ್ಮನ ಮಾಂಗಲ್ಯ ಸರ ಕದ್ದ ಯುವಕ

Spread the love

ಮೈಸೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಭಾರೀ ನಷ್ಟ ಅನುಭವಿಸಿ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ, ಸಾಲ ತೀರಿಸಲು ತನ್ನ ದೊಡ್ಡಮ್ಮನ ಮಾಂಗಲ್ಯ ಸರವನ್ನೇ ಕದ್ದ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

ಕುವೆಂಪುನಗರದ ಎಂ ಬ್ಲಾಕ್ ನಿವಾಸಿ ರಜತ್ (24) ಬಂಧಿತ ಆರೋಪಿ. ಅ.30ರಂದು ಬೆಳಗ್ಗೆ ಜ್ಯೋತಿ ಶಾಲೆ ಸಮೀಪದ ಮನೆಯೊಂದರಲ್ಲಿ ಒಬ್ಬರೇ ಇದ್ದ 69 ವರ್ಷದ ಲೀಲಾವತಿ ಅವರ ಮೇಲೆ ಖಾರದ ಪುಡಿ ಎರಚಿ, ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದ.

ಘಟನೆಗೆ ಸಂಬಂಧಿಸಿದಂತೆ ಲೀಲಾವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳದಲ್ಲಿ ದೊರೆತ ಸುಳಿವುಗಳ ಆಧಾರದಲ್ಲಿ ತನಿಖೆ ನಡೆಸಿ, ಕೇವಲ ಆರು ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ದೊಡ್ಡಮ್ಮನ ಮಾಂಗಲ್ಯ ಸರ ಕದ್ದಿರುವುದಾಗಿ ರಜತ್ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 30 ಗ್ರಾಂ ತೂಕದ ತುಂಡಾದ ಚಿನ್ನದ ಸರ ವಶಪಡಿಸಿಕೊಂಡು ಲೀಲಾವತಿ ಅವರಿಗೆ ಹಿಂದಿರುಗಿಸಲಾಗಿದೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಸುಂದರ್ ರಾಜ್ ತಿಳಿಸಿದ್ದಾರೆ.

 

[pj-news-ticker]