ಶಿವಮೊಗ್ಗ: ದಸರಾ ಚಾಮುಂಡೇಶ್ವರಿ ಮೂರ್ತಿ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ರಿದ್ದಾಗ ಗಾಬರಿಗೊಂಡು ದಾಂದಲೆ ನಡೆಸಿದ ಆನೆ ಸೋಮಣ್ಣನಿಗೆ ಪಶು ವೈದ್ಯರು ಅರೆವಳಿಕೆ ಚುಚ್ಚುಮದ್ದು ನೀಡಿ ನಿಯಂತ್ರಣಕ್ಕೆ ತಂದರು.
ಸಂಜೆ 4.30ಕ್ಕೆ ಶಿವಪ್ಪ ನಾಯಕ ಅರಮನೆ ಬಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಮೆರವಣಿಗೆಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿದ್ದರು.
ಅಂಬಾರಿ ಹೊತ್ತ ಸೋಮಣ್ಣನ ಜೊತೆ ಕಮ್ಮಿ ಆನೆಗಳಾಗಿ ಸಾಗರ್ ಹಾಗೂ ಬಹದ್ದೂರ್ ಸಾಥ್ ನೀಡಿದ್ದವು.
ಮೆರವಣಿಗೆ ಕೋಟೆ ರಸ್ತೆಯ ಜೈನ ಪಾಶ್ವಮಂದಿರದ ಬಳಿ ಬರುತ್ತಿದ್ದಂತೆಯೇ ಜನಜಂಗುಳಿ, ಪಟಾಕಿ ಹಾಗೂ ವಾದ್ಯಗಳ ಸದ್ದಿಗೆ ಗಾಬರಿಗೊಂಡ ಸೋಮಣ್ಣ ಮೆರವಣಿಗೆ ಮಾರ್ಗ ಬಿಟ್ಡು ಹಿಂದಕ್ಕೆ ತೆರಳತೊಡಗಿತು. ಅದನ್ನು ‘ಕುಮ್ಕಿ ಆನೆ ಸಾಗರ’ ಕೂಡ ಹಿಂಬಾಲಿಸಿತು.
ಮಾವುತರು, ಕಾವಾಡಿಗಳು ಎರಡು ಆನೆಗಳನ್ನು ನಿಯಂತ್ರಣಕ್ಕೆ ತರಲು ಮುಂದಾದರು. ಸಾಗರ ತಕ್ಷಣ ಶಾಂತಗೊಂಡಿತು. ಆದರೆ ಸೋಮಣ್ಣ ಆನೆ ಹರಸಾಹಸಪಟ್ಡರೂ ಜಗ್ಗಲಿಲ್ಲ. ಈ ವೇಳೆ ಅಂಬಾರಿ ಕೆಳಗೆ ಬಿದ್ದು ಜಖಂಗೊಂಡಿತು.
ಸೀದಾ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಸ ಆವರಣದೊಳಗೆ ತೆರಳಿದ ಆನೆ ಯಾರನ್ನೂ ಹತ್ತಿರಕ್ಕೆ ಸೇರಿಸಲಿಲ್ಲ. ಅದೃಷ್ಟವಶಾತ್ ಈ ವೇಳೆ ನೆರೆದಿದ್ದವರ ಮೇಲೆ ದಾಳಿ ಮಾಡಲಿಲ್ಲ.
ಆನೆಯನ್ನು ನಿಯಂತ್ರಣಕ್ಕೆ ತರಲು ಕೆಲಕಾಲ ಪ್ರಯತ್ನಿಸಿದ ಅರಣ್ಯ ಸಿಬ್ಬಂದಿ, ಅದು ಸಾಧ್ಯವಾಗದಿದ್ದಾಗ ಕೊನೆಗೆ ಪಶು ವೈದ್ಯರ ಕರೆಸಿ ಅರೆವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಿಯಂತ್ರಣಕ್ಕೆ ತಂದರು.
ಇದೇ ಮೊದಲ ದಸರಾ: ಕಳೆದ ಕೆಲ ವರ್ಷಗಳಿಂದ ‘ಸಾಗರ ಆನೆ’ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗುತ್ತಿತ್ತು. ಈ ಬಾರಿಯೂ ತಾಲೀಮು ನಡೆಸಿತ್ತು. ಆದರೆ ಅದಕ್ಕೆ ಕಾಲು ನೋವಿನ ಕಾರಣ ಮಂಗಳವಾರ ಸಂಜೆ ಸಭೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸೋಮಣ್ಣನಿಗೆ ಅಂಬಾರಿ ಹೊರುವ ಹೊಣೆ ನಿಗದಿಗೊಳಿಸಿದ್ದರು.
ಸಾಗರ ಹಾಗೂ ಬಹದ್ದೂರ್ ನನ್ನು ಕುಮ್ಕಿ ಆನೆಗಳಾಗಿ ಬಳಸಲು ನಿರ್ಧರಿಸಿದ್ದರು. ಪ್ರತಿ ವರ್ಷ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ಬಾಲಣ್ಣನ ಕಣ್ಣಿಗೆ ಗಾಯವಾಗಿದ್ದ ಕಾರಣ ಈ ಬಾರಿ ಅದರ ಬದಲು ಸೋಮಣ್ಣ ಆನೆಯನ್ನು ಮೆರವಣಿಗೆಗೆ ಕರೆತರಲಾಗಿತ್ತು.
