ಶಿವಮೊಗ್ಗ : ಅಳವಿನಂಚಿನ ಪ್ರಭೇದದ ಸಂತಾನೋತ್ಪತ್ತಿ ಉದ್ದೇಶದಿಂದ ಪ್ರಾಣಿ ವಿನಿಮಯ ಯೋಜನೆ ಭಾಗವಾಗಿ ಇಂದೋರ್ ನಿಂದ ‘ಶಿವ’ ಹಾಗೂ ‘ಸಾರಾ’ ಏಷ್ಯಾಟಿಕ್ ಸಿಂಹಗಳನ್ನ ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ ಕರೆತರಲಾಗಿದ್ದು, ಈ ಪೈಕಿ ಸಾರಾ ಹೆಸರಿನ ಸಿಂಹ ಇತ್ತೀಚಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದರಿಂದ ಸಂಭ್ರಮ ಮನೆ ಮಾಡಿತ್ತು. ಆದ್ರೆ, ಸಂಭ್ರಮ ಬಹಳ ದಿನಗಳು ಉಳಿಯಲಿಲ್ಲ. 5 ವರ್ಷದ ಏಷ್ಯಾಟಿಕ್ ಸಿಂಹ ‘ಸಾರಾ’ ಜನ್ಮ ನೀಡಿದ್ದ 4 ಮರಿಗಳು ಸಾವನ್ನಪ್ಪಿವೆ.
ಇದೇ ಸೆಪ್ಟೆಂಬರ್ 16 ರಂದು 4 ಮರಿಗಳಿಗೆ ಸಿಂಹಿಣಿ ‘ಸಾರಾ’ ಜನ್ಮ ನೀಡಿತ್ತು. ಜನಿಸಿದ ಎರಡು ದಿನದಲ್ಲೇ ನಾಲ್ಕೂ ಮರಿಗಳು ಮೃತಪಟ್ಟಿವೆ. ಸಿಂಹಿಣಿ ಸಾರಾ ತಾಯ್ತನದ ಕೊರತೆಯಿಂದ ಅಂದರೆ ಮರಿಗಳಿಗೆ ಸರಿಯಾಗಿ ಹಾಲು ನೀಡದೇ ನಿರ್ಲಕ್ಷ್ಯದಿಂದ ಮರಿಗಳು ಮೃತಪಟ್ಟಿವೆ ಎನ್ನುವುದು ಮೃಗಾಲಯದ ಅಧಿಕಾರಿಗಳು ಹೇಳುತ್ತಿದ್ದಾರೆ.
ಮೃಗಾಲಯದಲ್ಲಿ ಓಡಾಡಿಕೊಂಡು ಪ್ರವಾಸಿಗರಿಗೆ ಮುದಾ ನೀಡಬೇಕಿದ್ದ ಮುದ್ದಾದ ನಾಲ್ಕು ಸಿಂಹದ ಮರಿಗಳು ದುರಂತ ಸಾವು ಕಂಡಿದ್ದು, ಮೃಗಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ.
2025 ರಲ್ಲಿ ಪ್ರಾಣಿ ವಿನಿಮಯ ಯೋಜನೆ ಭಾಗವಾಗಿ ಅಳವಿನಂಚಿನ ಪ್ರಭೇದದ ಸಂತಾನೋತ್ಪತ್ತಿ ಉದ್ದೇಶದಿಂದ ಮಧ್ಯಪ್ರದೇಶದ ಇಂದೋರ್ ನಿಂದ ‘ಶಿವ’ ಹಾಗೂ ‘ಸಾರಾ’ ಏಷ್ಯಾಟಿಕ್ ಸಿಂಹಗಳನ್ನ ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ ಕರೆತರಲಾಗಿತ್ತು. ಬಳಿಕ ಒಂದೇ ವರ್ಷದಲ್ಲಿ ಸಾರಾ ಸಿಂಹ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದ್ರೆ, ಇದೀಗ ಅವು ಸಾವನ್ನಪ್ಪಿವೆ.
