Trending

ಬೆಂಗಳೂರು: ಡೆತ್‌ನೋಟ್‌ ಬರೆದಿಟ್ಟು ಶಿವಮೊಗ್ಗದ ಯುವತಿ ಆತ್ಮಹತ್ಯೆ

Spread the love

ಬೆಂಗಳೂರು: ಕಾಲೇಜು ಸಹಪಾಠಿ ಯುವಕನೋರ್ವ ನಿರಂತರವಾಗಿ ಬ್ಲಾಕ್‌ಮೇಲ್ ಹಾಗೂ ಕಿರುಕುಳ ನೀಡುತ್ತಿದ್ದಾನೆ ಎಂದು ಡೆತ್‌ನೋಟ್‌ ಬರೆದಿಟ್ಟು, 22 ವರ್ಷದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.​

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಲಮಕ್ಕಿ ಮೂಲದ ಯುವತಿ ವಾಣಿ ಆತ್ಮಹತ್ಯೆಗೆ ಶರಣಾದವರು.

ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಇವರು, ನಗರದ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಶನಿವಾರ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗರ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

​ಡೆತ್‌ನೋಟ್‌ನಲ್ಲಿ ಬಿಚ್ಚಿಟ್ಟ ಯಾತನೆ: ಆತ್ಮಹತ್ಯೆಗೂ ಮುನ್ನ ವಾಣಿ ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ, ನನ್ನ ಸಾವಿಗೆ ಕಾಲೇಜು ದಿನಗಳ ಕ್ಲಾಸ್‌ಮೇಟ್ ಯುವಕ ಕಾರಣ ಎಂದು ಆರೋಪಿಸಿದ್ದಾರೆ.

ಕಾಲೇಜು ದಿನಗಳಲ್ಲಿ ಒಟ್ಟಿಗೆ ಓದುತ್ತಿದ್ದ ಸಹಪಾಠಿಯು ನನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ನಾನು ಕರೆದಾಗಲೆಲ್ಲಾ ರೂಮಿಗೆ ಬರಬೇಕು, ಇಲ್ಲದಿದ್ದರೆ ಫೋಟೋ-ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಕುಟುಂಬದ ಮಾನ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ.

ಈ ಮಾನಸಿಕ ಕಿರುಕುಳವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ತೀವ್ರ ಖಿನ್ನತೆ ಮತ್ತು ಆಘಾತಕ್ಕೆ ಒಳಗಾಗಿ ಬೇರೆ ದಾರಿ ಕಾಣದೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ.

ನನ್ನ ಸಾವಿಗೆ ಸಹಪಾಠಿಯೇ ಕಾರಣ. ಅವನಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಕುಟುಂಬದವರನ್ನು ನಾನು ತುಂಬಾ ಪ್ರೀತಿಸುತ್ತೇನೆ, ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯುವಕನ ಪತ್ತೆಗೆ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

[pj-news-ticker]